ನವದೆಹಲಿ: ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿ ಅಪೂರ್ಣ ಮಾಹಿತಿ ನೀಡಿದ್ದಕ್ಕಾಗಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐಐ) ಅನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಬಾಂಡ್‌ಗಳಿಗೆ ಇರುವ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಎಸ್‌ಬಿಐ ಬಹಿರಂಗಪಡಿಸಿಲ್ಲ. ಈ ಸಂಖ್ಯೆಯನ್ನು ಬಹಿರಂಗಪಡಿಸಿದರೆ ಬಾಂಡ್‌ಗಳ ಖರೀದಿದಾರರು ಯಾರು ಮತ್ತು ಅವುಗಳನ್ನು ಯಾವ ಪಕ್ಷಕ್ಕೆ ನೀಡಲಾಗಿದೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಗುರುತಿನ ಸಂಖ್ಯೆಯನ್ನು ಬಹಿರಂಗಪಡಿಸುವುದು ಎಸ್‌ಬಿಐಯ ಕರ್ತವ್ಯವಾಗಿದೆ. ಹಾಗಿದ್ದರೂ ಬ್ಯಾಂಕ್ ಈ ಮಾಹಿತಿಯನ್ನು ನೀಡಿಲ್ಲ. ನೀಡದೇ ಇರಲು ಕಾರಣಗಳೇನು ಎಂಬುದನ್ನು ವಿವರಿಸಬೇಕು ಎಂದು ಕೋರ್ಟ್, ಎಸ್‌ಬಿಐಗೆ ನೋಟಿಸ್ ನೀಡಿದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಐವರು ಸದಸ್ಯರ ಪೀಠವು ಮುಂದಿನ ವಿಚಾರಣೆಯನ್ನು 18ಕ್ಕೆ ನಿಗದಿ ಮಾಡಿದೆ. ಎಸ್‌ಬಿಐ ಒದಗಿಸಿದ್ದ ವಿವರಗಳನ್ನು ಚುನಾವಣಾ ಆಯೋಗವು ಗುರುವಾರ ಬಹಿರಂಗಪಡಿಸಿದೆ. ಅದರ ಬೆನ್ನಿಗೇ ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೀಠವು ಈ ಕುರಿತ ಸ್ಪಷ್ಟ ನಿರ್ದೇಶನ ನೀಡಿತು. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್. ಗವಾಯಿ, ಜೆ.ಬಿ. ಪಾರ್ದೀವಾಲಾ, ಮನೋಜ್ ಮಿಶ್ರಾ ಅವರು ಈ ಪೀಠದ ಇತರ ಸದಸ್ಯರಾಗಿದ್ದಾರೆ. ‘ಎಸ್‌ಬಿಐ ಅನ್ನು ಯಾರು ಪ್ರತಿನಿಧಿಸುತಿದ್ದೀರಿ? ಆದೇಶದಲ್ಲಿ ನಾವು ನಿರ್ದಿಷ್ಟವಾಗಿ ಬಾಂಡ್‌ಗಳ ಖರೀದಿದಾರರು, ಮೊತ್ತ, ಖರೀದಿಸಿದ ದಿನಾಂಕದ ವಿವರ ಬಹಿರಂಗಪಡಿಸಲು ನಿರ್ದೇಶಿಸಿದ್ದೆವು. ಆದರೆ, ಬಾಂಡ್‌ಗಳ ಗುರುತು ಸಂಖ್ಯೆ ಒದಗಿಸಿಲ್ಲ. ಇದನ್ನೂ ಒದಗಿಸಿ’ ಎಂದು ಮುಖ್ಯ ನ್ಯಾಯಮೂರ್ತಿ ಸ್ಪಷ್ಟವಾಗಿ ಆದೇಶಿಸಿದರು. ‘ಬಾಂಡ್‌ಗಳ ವಿಶಿಷ್ಟ ಗುರುತು ಸಂಖ್ಯೆಯ ಮೂಲಕ ಅವುಗಳನ್ನು ಖರೀದಿಸಿದವರು ಯಾರು ಹಾಗೂ ಅದನ್ನು ನಗದೀಕರಣ ಮಾಡಿಕೊಂಡ ಪಕ್ಷ ಯಾವುದು ಎಂಬುದನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಈಗ ಒದಗಿಸಿರುವ ವಿವರಗಳನ್ನು ವಿಶೇಷವಾಗಿ ಪರಿಗಣಿಸುವ ಅಗತ್ಯವಿಲ್ಲ. ಅದು ಬ್ಯಾಂಕ್‌ನವರ ಕರ್ತವ್ಯವಾಗಿದೆ’ ಎಂದು ಹೇಳಿದರು. ಬಾಂಡ್‌ಗಳ ಪ್ರಕರಣದಲ್ಲಿ ಮಾರ್ಚ್ 11ರಂದು ನೀಡಿದ್ದ ಆದೇಶದ ಕೆಲವು ಅಂಶಗಳ ಪರಿಷ್ಕರಣೆ ಕೋರಿ ಚುನಾವಣಾ ಆಯೋಗವು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಈ ಸೂಚನೆ ನೀಡಿತು. ‘ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದ ವಿವರಗಳಲ್ಲಿ ಯಾವುದೇ ಪ್ರತಿಯನ್ನು ಆಯೋಗ ಬಾಕಿ ಉಳಿಸಿಕೊಂಡಿಲ್ಲ’ ಎಂದು ಆಯೋಗವನ್ನು ಪ್ರತಿನಿಧಿಸಿದ್ದ ವಕೀಲರು ಪೀಠದ ಗಮನಕ್ಕೆ ತಂದರು. ಬಾಂಡ್‌ಗಳ ಅಂಕಿ–ಅಂಶ ಕುರಿತಂತೆ ಕೋರ್ಟ್‌ನ ರಿಜಿಸ್ಟ್ರಿಗೆ ಸಲ್ಲಿಕೆಯಾಗಿರುವ ಎಲ್ಲ ದಾಖಲೆಗಳ ಪ್ರತಿಗಳನ್ನು ಆಯೋಗಕ್ಕೆ ನೀಡಲಾಗುವುದು ಎಂದು ಪೀಠ ಹೇಳಿತು. ಪೀಠದ ಮಧ್ಯಂತರ ಆದೇಶಕ್ಕೆ ಅನುಗುಣವಾಗಿ ಚುನಾವಣಾ ಆಯೋಗವು ಸಲ್ಲಿಸಿರುವ ಅಂಕಿ ಅಂಶದ ಪ್ರತಿಗಳನ್ನು ಸ್ಕ್ಯಾನ್ ಹಾಗೂ ಡಿಜಿಟಲೀಕರಣ ಮಾಡಲಾಗಿದೆ ಎಂಬುದನ್ನು ಕೋರ್ಟ್‌ನ ರಿಜಿಸ್ಟ್ರಾರ್ ಖಾತರಿಪಡಿಸಿಕೊಳ್ಳಬೇಕು. ಈ ಪ್ರಕ್ರಿಯೆಯು ಶನಿವಾರ ಸಂಜೆ 5 ಗಂಟೆಯೊಳಗೆ ಆಗಬೇಕು ಎಂದು ಪೀಠವು ಸೂಚಿಸಿತು. ಈ ಪ್ರಕ್ರಿಯೆ ಬಳಿಕ ದಾಖಲೆಗಳ ಮೂಲ ಪ್ರತಿಗಳನ್ನು ಆಯೋಗದ ಪರ ವಕೀಲರಿಗೆ ಹಸ್ತಾಂತರಿಸಬೇಕು. ತದನಂತರ ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಅದೇ ದಿನ ಅಥವಾ ಮಾರನೇ ದಿನ ಅದನ್ನು ಪ್ರಕಟಿಸಬೇಕು ಎಂದು ಸ್ಪಷ್ಟ ನಿರ್ದೇಶನವನ್ನು ನೀಡಿತು. ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಚುನಾವಣಾ ಬಾಂಡ್‌ಗಳ ವಿವರ ಕುರಿತು ಎಸ್‌ಬಿಐ ಪೂರ್ಣ ವಿವರ ಬಹಿರಂಗಪಡಿಸಬೇಕು ಎಂಬ ಬಗ್ಗೆ ಕೋರ್ಟ್‌ನ ಆದೇಶ ಸ್ಪಷ್ಟವಾಗಿದೆ ಎಂದು ಹೇಳಿದರು. ವಿಚಾರಣೆ ಸಂದರ್ಭದಲ್ಲಿ ಎಸ್‌ಬಿಐನವರು ಹಾಜರಿರಬೇಕು ಎಂದು ಪೀಠ ತಾಕೀತು ಮಾಡಿತು. ಇದಕ್ಕೆ, ಕೇಂದ್ರ ಸರ್ಕಾರ ಮತ್ತು ಎಸ್‌ಬಿಐಯನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ‘ಈಗ ಈ ಪ್ರಕರಣದಲ್ಲಿ ಎಸ್‌ಬಿಐ ಪ್ರತಿವಾದಿಯಲ್ಲ’ ಎಂದು ತಿಳಿಸಿದರು.