ಸಿರಿಯಾ: ಉಗ್ರರ ಅಟ್ಟಹಾಸಕ್ಕೆ 100ಕ್ಕೂ ಅಧಿಕ ಮಂದಿ ಬಲಿಯಾಗಿದ್ದು, 125 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಸಿರಿಯಾದ ಮಿಲಿಟರಿ ಅಕಾಡೆಮಿ ಮೇಲೆ ಸ್ಫೋಟಕಗಳನ್ನು ಹೊತ್ತಿದ್ದ ಡ್ರೋನ್ ದಾಳಿಯಲ್ಲಿ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಪದವೀಧರ ವಿದ್ಯಾರ್ಥಿಗಳ ಘಟಿಕೋತ್ಸವ ಸಮಾರಂಭದ ವೇಳೆ ಈ ದಾಳಿ ನಡೆದಿದೆ. ಘಟನೆಯಲ್ಲಿ ಮಕ್ಕಳು, ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಹಲವು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮಿಲಿಟರಿ ಸಮಾರಂಭದಿಂದ ಸಿರಿಯಾದ ರಕ್ಷಣಾ ಸಚಿವರು ನಿರ್ಗಮಿಸಿದ ಸ್ವಲ್ಪ ಸಮಯದ ನಂತರ, ಡ್ರೋನ್‌ಗಳಿಂದ ಬಾಂಬ್‌ಗಳ ಮಳೆ ಸುರಿಯಲಾರಂಭಿಸಿತು ಎಂದು ಹೇಳಲಾಗುತ್ತಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಸಿರಿಯನ್ ಸೇನೆಯ ಮೇಲೆ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಒಂದಾಗಿದೆ. ಯುದ್ಧ ಪೀಡಿತ ದೇಶದ ಕುರ್ದಿಶ್ ಹಿಡಿತದಲ್ಲಿರುವ ಈಶಾನ್ಯದಲ್ಲಿ ಟರ್ಕಿಯ ವಾಯು ದಾಳಿಗಳು ಕನಿಷ್ಠ ಒಂಬತ್ತು ಜನರನ್ನು ಕೊಂದಿವೆ ಎಂದು ಕುರ್ದಿಶ್ ಪಡೆಗಳು ತಿಳಿಸಿವೆ. ಅಂಕಾರಾ ಆತ್ಮಾಹುತಿ ಬಾಂಬ್ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಸುವುದಾಗಿ ಈ ಮೊದಲೇ ಬೆದರಿಕೆ ಬಂದಿತ್ತು ಎನ್ನಲಾಗ್ತಿದೆ.