ಬೆಂಗಳೂರು: ಮೀಸಲಾತಿಯೊಂದೇ ಹಿಂದುಳಿದ ವರ್ಗದವರ ಏಳಿಗೆಗೆ ಸಹಾಯಕ ಅಸ್ತ್ರ. ಹೀಗಿರುವಾಗ ನಾವು ನಮ್ಮ ನೆಲೆಯನ್ನು ಕಂಡುಕೊಳ್ಳಬೇಕಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಸದಾಶಿವನಗರದ ನಾಗಸೇನ ವಿದ್ಯಾಲಯ ಮೈದಾನದಲ್ಲಿ ಸಮತಾ ಸೈನಿಕ ದಳ, ಭಾರತೀಯ ಬೌದ್ಧ ಮಹಾಸಭಾದ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ `ಭೀಮಾ ಕೋರೇಗಾಂವ್ ವಿಜಯೋತ್ಸವ’ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮೀಸಲಾತಿ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಹೀಗಾಗಿ ನಾವು ಅದರ ಬಗ್ಗೆ ಚಿಂತಿಸಿ ನಮ್ಮ ನೆಲೆ ಕಂಡುಕೊಳ್ಳಬೇಕಾಗಿದೆ ಎಂದರು.
ಅಂಬೇಡ್ಕರ್ ರಚಿತ ಸಂವಿಧಾನ ಬದಲಾಯಿಸಬೇಕು. ಮೀಸಲಾತಿ ತೆಗೆಯಬೇಕೆಂಬ ಒಡಕು ಮಾತುಗಳು ಸಾಕಷ್ಟು ಹರಿದಾಡುತ್ತಿವೆ. ಆ ಮಾತುಗಳನ್ನು ಬದಿಗಿಟ್ಟು, ಹಿಂದುಳಿದ ವರ್ಗದವರಾದ ನಾವು ನಮ್ಮ ಏಳಿಗೆ ಬಗ್ಗೆ ಚಿಂತಿಸುವುದು ಉತ್ತಮ ಎಂದು ಅವರು ಹೇಳಿದರು.
ಹಿಂದುಳಿದ ವರ್ಗದವರಿಗೆ ಮೀಸಲಾತಿ ಇಲ್ಲದೇ ಸಾಮಾನ್ಯರಂತೆ ಚುನಾವಣೆಯಲ್ಲಿ ಗೆಲ್ಲಲು ಕಷ್ಟವಾಗುವ ಪರಿಸ್ಥಿತಿ ಇನ್ನೂ ಇದೆ. ನಮಗೆ ಕೀಳರಿಮೆಯಿದ್ದರೆ ಜೀವನದಲ್ಲಿ ಹಿಂದಕ್ಕೆ ಹೋಗುತ್ತೇವೆ. ಹೀಗಾಗಿ, ಕೀಳರಿಮೆಯಿಂದ ಹೊರ ಬಂದು, ಶೋಷಿತ ಸಮುದಾಯಗಳು ಸಂಘರ್ಷದಿಂದ ಬದುಕಬೇಕಾಗಿದೆ ಎಂದು ಕಿವಿ ಮಾತು ಹೇಳಿದರು.