ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಎರಡನೇ ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸಿದರು.
ಮೈಸೂರು ಲೋಕಾಯುಕ್ತ ಕಚೇರಿಗೆ ಆಗಮಿಸಿದ ಸಿಎಂ ಪತ್ನಿ ಪಾರ್ವತಿ ಅವರನ್ನು ಮೂರು ಗಂಟೆಗಳ ಕಾಲ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸಿದರು. ಈ ವೇಳೆ ಪಾರ್ವತಿ ಅವರಿಂದ ಅಧಿಕಾರಿಗಳು ಹೇಳಿಕೆ ದಾಖಲಿಸಿದರು. ಲೋಕಾಯುಕ್ತ ಅಧಿಕಾರಿಗಳು ಗೌಪ್ಯವಾಗಿ ಮಾಹಿತಿ ಸಂಗ್ರಹಿಸಿದ್ದು, ಪಾರ್ವತಿ ಅವರ ಹೇಳಿಕೆ ಮಹತ್ವ ಪಡೆದುಕೊಂದಿದೆ.
ಮುಡಾ ಹಗರಣ ಸಂಬಂಧ ಈಗಾಗಲೇ ಲೋಕಾಯುಕ್ತ ಅಧಿಕಾರಿಗಳು ಎ3 ಮಲ್ಲಿಕಾರ್ಜುನಸ್ವಾಮಿ, ಎ4 ದೇವರಾಜು ಅವರ ವಿಚಾರಣೆಯನ್ನು ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಎ1 ಆರೋಪಿ ಸಿಎಂ ಸಿದ್ದರಾಮಯ್ಯ ಅವರ ವಿಚಾರಣೆ ಮಾತ್ರ ಬಾಕಿಯಿದೆ.
ರಾಜ್ಯಪಾಲರು ತನಿಖೆಗೆ ಆದೇಶ ನೀಡಿರುವ ಕ್ರಮ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.ಮುಡಾ ಪ್ರಕರಣ ಸಂಬಂಧ ಹೈಕೋರ್ಟ್ ಏಕಸದಸ್ಯಪೀಠ ನೀಡಿರುವ ಆದೇಶವನ್ನು ರದ್ದು ಮಾಡುವಂತೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದು, ವಿಭಾಗೀಯ ಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮುಡಾದಿಂದ 14 ನಿವೇಶನಗಳನ್ನು ಅಕ್ರಮವಗಿ ಪಡೆದಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲರಿಗೆ ದೂರು ನೀಡಲಾಗಿತ್ತು. ಪ್ರಕರಣದ ಬಗ್ಗೆ ತನಿಖೆ ನಡೆಸಲು ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಅನುಮತಿ ನೀಡಿ ಆದೇಶಿಸಿದ್ದರು. ಸಿಎಂ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಏಕಸದಸ್ಯ ಪೀಠ ಕೂಡ ರಾಜ್ಯಪಾಲರ ಆದೇಶ ಸರಿಯಾಗಿದೆ ಎಂದು ತೀರ್ಪು ನೀಡಿತ್ತು. ಮುಡಾ ಹಗರಣದ ಬಗ್ಗೆ ಲೋಕಾಯುಕ್ತ ತನಿಖೆ ಆರಂಭವಾಗುತ್ತಿದ್ದಂತೆ ಸಿಎಂ ಪತ್ನಿ ಪಾರ್ವತಿ 14 ನಿವೇಶನಗಳನ್ನು ಮುಡಾಗೆ ಹಿಂದಿರುಗಿಸಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ಮುಡಾ ಪ್ರಕರಣದ ಕೇಸ್ ರದ್ದುಪಡಿಸುವಂತೆ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ.