ಮುಂಬರುವ ವರ್ಷ ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಈಗಾಗಲೇ ಪಕ್ಷಗಳು ಚುನಾವಣೆಗೆ ಕಸರತ್ತುಗಳನ್ನು ನಡೆಸುತ್ತಿದೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಮತದಾನ ಮಾಡದಿದ್ದರೆ ಬ್ಯಾಂಕ್ ಖಾತೆಯಿಂದ 350 ರೂಪಾಯಿ ಕಡಿತಗೊಳಿಸಲಾಗುವುದು ಎಂಬ ಸುದ್ದಿ ವೈರಲ್ ಆಗಿತ್ತು.
ಈ ಬಗ್ಗೆ ಕೇಂದ್ರ ಸರ್ಕಾರದ ಸತ್ಯ ತಪಾಸಣೆ ಘಟಕವಾದ ಪಿಐಬಿ ಫ್ಯಾಕ್ಟ್ ಚೆಕ್ ಇದನ್ನು ಪರಿಶೀಲಿಸಿ ಇದು ಸುಳ್ಳು ಸುದ್ದಿ ಎಂದು ಹೇಳಿದೆ.
ವೈರಲ್ ಆಗಿರೋ ಪತ್ರಿಕೆಯ ತುಣುಕು ಹೋಳಿ ಸಂದರ್ಭದಲ್ಲಿ ಪ್ರಕಟವಾದ ಒಂದು ತಮಾಷೆಯ ಸುದ್ದಿಯಾಗಿದೆ. ಆದರೆ ಜನರು ಈ ಸುದ್ದಿಯನ್ನು ನಿಜವೆಂದು ಸ್ವೀಕರಿಸಿ, ನಂಬಿದ್ದರು. ಅದಲ್ಲದೆ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ವೈರಲ್ ಫೇಕ್ ನ್ಯೂಸ್‌ನಲ್ಲಿ ಹೇಳಿದ್ದೇನು ?
ಮತದಾನ ಮಾಡದವರನ್ನು ಆಧಾರ್ ಕಾರ್ಡ್ ಮೂಲಕ ಗುರುತಿಸಲಾಗುತ್ತದೆ ಮತ್ತು ಆ ಕಾರ್ಡ್‌ಗೆ ಲಿಂಕ್ ಮಾಡಿದ ಅವರ ಬ್ಯಾಂಕ್ ಖಾತೆಯಿಂದ ₹350 ಹಣವನ್ನು ಕಡಿತಗೊಳಿಸಲಾಗುತ್ತದೆ ಎಂದು ವೈರಲ್ ನ್ಯೂಸ್‌ನಲ್ಲಿ ತಪ್ಪು ಮಾಹಿತಿ ನೀಡಲಾಗಿದೆ.
ಬ್ಯಾಂಕ್ ಖಾತೆಯಲ್ಲಿ 350 ರೂಪಾಯಿ ಇಲ್ಲದಿದ್ದರೆ ಅಥವಾ ಬ್ಯಾಂಕ್ ಖಾತೆಯೇ ಇಲ್ಲದ ಮತದಾರರು ತಮ್ಮ ಮೊಬೈಲ್ ಫೋನ್ ರೀಚಾರ್ಜ್ ಸಮಯದಲ್ಲಿ ಈ ಹಣವನ್ನು ಕಡಿತಗೊಳಿಸಲಾಗುವುದು ಎಂದು ನಕಲಿ ಸುದ್ದಿಯಲ್ಲಿ ಹೇಳಲಾಗಿದೆ. ಇದಕ್ಕಾಗಿ ಕನಿಷ್ಠ 350 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಮತ್ತು ಇದಕ್ಕಿಂತ ಕಡಿಮೆ ರೀಚಾರ್ಜ್‌ಗೆ ಅವಕಾಶವಿರುವುದಿಲ್ಲ.
ಅಲ್ಲದೇ ಆಯೋಗವು ಈಗಾಗಲೇ ನ್ಯಾಯಾಲಯದಿಂದ ಅನುಮತಿ ಪಡೆದಿರುವುದರಿಂದ ಆಯೋಗದ ನಿರ್ಧಾರದ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂದು ಆ ಸುದ್ದಿಯಲ್ಲಿ ಉಲ್ಲೇಖಿಸಲಾಗಿತ್ತು.
ಈ ಸುದ್ದಿಯನ್ನು ನಾಲ್ಕು ವರ್ಷಗಳ ಹಿಂದೆ ಹೋಳಿ ಹಬ್ಬದಂದು ಪತ್ರಿಕೆಯೊಂದು ಹಾಸ್ಯಮಯವಾಗಿ ಪ್ರಕಟಿಸಿತ್ತು. ಈ ಸುದ್ದಿಯ ಕೆಳಗೆ ಹೋಳಿ ಹಬ್ಬವಾಗಿರೋದ್ರಿಂದ ದುಃಖಿಸಬೇಡಿ ಎಂದು ಸ್ಪಷ್ಟ ಪದಗಳಲ್ಲಿ ಬರೆಯಲಾಗಿದೆ. ಅಷ್ಟೇ ಅಲ್ಲ ‘ಈ ಪೇಜ್‌ನಲ್ಲಿರುವ ಎಲ್ಲಾ ಸುದ್ದಿಗಳು ಕಾಲ್ಪನಿಕ’ ಎಂದು ಸಹ ಬರೆಯಲಾಗಿತ್ತು. ಆದರೆ ಜನ ಇದನ್ನು ನಿಜ ಎಂದು ನಂಬಿದ್ದರು.
ಪಿಐಬಿ ಫ್ಯಾಕ್ಟ್ ಚೆಕ್ ಈ ವೈರಲ್ ಕಟಿಂಗ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ ಮತ್ತು ಇದು ಸುಳ್ಳು ಸುದ್ದಿ ಎಂದು ಪ್ರಕಟ ಮಾಡಿದೆ.