ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಮರಾಠಿಗರ ಮೀಸಲಾತಿ ಹೋರಾಟ ತೀವ್ರಗೊಂಡಿದ್ದು, ಬುಧವಾರ (ನವೆಂಬರ್ 01) ಬೆಳಗ್ಗೆ ಪ್ರತಿಭಟನಾಕಾರರು ಸಚಿವ ಹಸನ್ ಮುಶಿರಿಫ್ ಅವರ ಎಸ್ ಯುವಿ ಕಾರನ್ನು ಜಖಂಗೊಳಿಸಿರುವ ಘಟನೆ ದಕ್ಷಿಣ ಮುಂಬಯಿಯಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಮರೈನ್ ಡ್ರೈವ್ ಪೊಲೀಸರು ಮೂವರನ್ನು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮುಶಿರಿಫ್ ಡಿಸಿಎಂ ಅಜಿತ್ ಪವಾರ್ ಬಣದ ಎನ್ ಸಿಪಿ ಶಾಸಕರಾಗಿದ್ದಾರೆ. ಬುಧವಾರ ಬೆಳಗ್ಗೆ ಮರಾಠ ಮೀಸಲಾತಿ ಪ್ರತಿಭಟನೆಯ ಕಾರ್ಯಕರ್ತರಿಬ್ಬರು ಮರದ ದೊಣ್ಣೆಯಿಂದ ದಕ್ಷಿಣ ಮುಂಬೈಯ ಆಕಾಶವಾಣಿ ಎಂಎಲ್ ಎ ಹಾಸ್ಟೆಲ್ ಸಮೀಪ ಪಾರ್ಕ್ ಮಾಡಿದ್ದ ಸಚಿವರ ಕಾರಿನ ಗಾಜು, ಬಾಗಿಲನ್ನು ಪುಡಿಗೈದಿದ್ದರು. ಈ ಸಂದರ್ಭದಲ್ಲಿ ಏಕ್ ಮರಾಠ, ಲಕ್ಷಾಂತರ ಮರಾಠಿಗರು ಎಂಬ ಘೋಷಣೆ ಕೂಗಿರುವುದಾಗಿ ವರದಿ ತಿಳಿಸಿದೆ. ಪ್ರಕರಣದಲ್ಲಿ ಮೂವರನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಕ್ಟೋಬರ್ 26ರಂದು ಕೂಡಾ ವಾಹನಗಳನ್ನು ಜಖಂಗೊಳಿಸಿದ್ದ ಘಟನೆ ನಡೆದಿತ್ತು.