ಮುಂಬೈ: ವಾಣಿಜ್ಯ ರಾಜಧಾನಿ ಮುಂಬೈನ ಘಟ್ಕೋಪರ್‌ನಲ್ಲಿ ಹೋರ್ಡಿಂಗ್‌ನಿಂದ ಸಂಭವಿಸಿದ ಭಾರೀ ದುರಂತಕ್ಕೆ ಸಂಬಂಧಿಸಿದಂತೆ ಹೋರ್ಡಿಂಗ್‌ನ ಮಾಲೀಕತ್ವದ ಜಾಹೀರಾತು ಸಂಸ್ಥೆಯ ನಿರ್ದೇಶಕ ಭವೇಶ್ ಭಿಂಡೆಯನ್ನು ಬಂಧಿಸಿದ್ದಾರೆ.
ಘಟ್ಕೋಪರ್‌ನ ಪೆಟ್ರೋಲ್ ಪಂಪ್‌ನಲ್ಲಿ ಹೋರ್ಡಿಂಗ್ ಕುಸಿದು ಕನಿಷ್ಠ 16 ಜನರು ಸಾವನ್ನಪ್ಪಿದ್ದು, 74 ಜನರು ಗಾಯಗೊಂಡಿದ್ದಾರೆ. ಈ ದುರಂತದ ಬೆನ್ನಲ್ಲೇ ಪರಾರಿಯಾಗಿದ್ದು ಭವೇಶ್ ಭಿಂಡೆಯನ್ನು ರಾಜಸ್ಥಾನದ ಉದಯಪುರದಲ್ಲಿ ಬಂಧಿಸಲಾಗಿದೆ. ಭವೇಶ್ ವಿರುದ್ಧ ಈ ಮುನ್ನ ಅತ್ಯಾಚಾರ ಸೇರಿದಂತೆ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.
ಕಳೆದ ಜನವರಿಯಲ್ಲಿ ಭವೇಶ್ ವಿರುದ್ಧ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿತ್ತು. ಬಾಂಬೆ ಹೈಕೋರ್ಟ್‌ನಲ್ಲಿ ಜಾಮೀನು ಪಡೆದು ಹೊರಬಂದಿದ್ದ. 2009ರಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿದ್ದ ಈತನ ವಿರುದ್ಧ ಮುಂಬಯಿ ಮಹಾನಗರ ಪಾಲಿಕೆ ಅಕ್ರಮ ಹೋರ್ಡಿಂಗ್ ಅಳವಡಿಕೆಗಾಗಿ 21 ಬಾರಿ ದಂಡ ವಿಧಿಸಿತ್ತು.