ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ಕೊಡುವ ದಿನ ಹತ್ತಿರ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಬೇಲಿಯೇ ಎದ್ದು ಹೊಲ ಮೇಯ್ದ ಪರಿಸ್ಥಿತಿ ಇವತ್ತು ರಾಜ್ಯದಲ್ಲಿ ಉದ್ಭವವಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಹಣಕಾಸು ಇಲಾಖೆ ಸಚಿವರೂ ಆದ ಮುಖ್ಯಮಂತ್ರಿಗಳ ಸಮ್ಮತಿ ಇಲ್ಲದೇ, ಅವರ ಗಮನಕ್ಕೆ ಬಾರದೆ ಹಣ ವರ್ಗಾವಣೆ ಆಗಲು ಸಾಧ್ಯವೇ ಇರಲಿಲ್ಲ ಎಂದು ನುಡಿದರು.
ಕೇವಲ ಮಾಜಿ ಸಚಿವ ನಾಗೇಂದ್ರ, ದದ್ದಲ್ ಅವರಷ್ಟೇ ಅಲ್ಲ; ಇನ್ನೂ ದೊಡ್ಡ ದೊಡ್ಡವರ ಹೆಸರು ಮುಂದೆ ಬರಲಿದೆ. ಹಾಗಾಗಿ ಆತಂಕದಿಂದಲೇ ನಿನ್ನೆ ರಾಜ್ಯದ 5 ಸಚಿವರು ಇ.ಡಿ. ಮೇಲೆ ಆಪಾದನೆ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿಸಿದರು. ಮುಖ್ಯಮಂತ್ರಿಗಳು ಸದನದಲ್ಲಿ ಉತ್ತರ ಕೊಡುವ ಪ್ರಯತ್ನ ಮಾಡಿದ್ದು, ಸತ್ಯಸಂಗತಿಗಳನ್ನು ಮರೆಮಾಚಿ, ಸದನಕ್ಕೆ ಮತ್ತು ರಾಜ್ಯದ ಜನತೆಗೆ ತಪ್ಪು ಮಾಹಿತಿ, ತಪ್ಪು ಸಂದೇಶ ಕೊಡುವ ಪ್ರಯತ್ನ ಮಾಡಿದ್ದಾರೆ ಎಂದು ಟೀಕಿಸಿದರು.
ಮುಖ್ಯಮಂತ್ರಿಗಳು ಈ ಹಗರಣದಿಂದ ತಪ್ಪಿಸಿಕೊಂಡು ಹೋಗಲು ಸಾಧ್ಯ ಇಲ್ಲ ಎಂಬುದಂತೂ ಸತ್ಯ. ಸಿದ್ದರಾಮಯ್ಯನವರೇ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣದಿಂದ ಪರಿಶಿಷ್ಟ ಜಾತಿ, ಪಂಗಡಗಳ ಶಾಪ ನಿಮಗೆ ತಟ್ಟದೇ ಬಿಡುವುದಿಲ್ಲ ಎಂದು ಎಚ್ಚರಿಸಿದರು. ಈಗಾಗಲೇ ಇ.ಡಿ, ಸಿಬಿಐ ತನಿಖೆ ನಡೆಯುತ್ತಿದ್ದು, ತಾವು ಉತ್ತರ ಕೊಡಲೇಬೇಕಾಗುತ್ತದೆ ಎಂದು ತಿಳಿಸಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಾತನಾಡಿ, ವಾಲ್ಮೀಕಿ ನಿಗಮದ 187 ಕೋಟಿ ಹಣವನ್ನು ಈ ಸರಕಾರದ ಒಬ್ಬ ಸಚಿವರು, ಒಬ್ಬ ಶಾಸಕ, ಮುಖ್ಯಮಂತ್ರಿ ಸೇರಿ ಹಲವಾರು ಸಚಿವರು ಲೂಟಿ ಮಾಡಿ ಲೋಕಸಭಾ ಚುನಾವಣೆಗೆ ಬಳಸಿದ್ದು, ಅದು ಇ.ಡಿ. ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟವಾಗಿದೆ. ಲೂಟಿ ಆದ ಹಣ ಎಲ್ಲೆಲ್ಲಿ ಹೋಗಿದೆ? ಯಾವಾಗ ವಾಪಸ್ ತರುತ್ತೀರಿ ಎಂದು ನಾವು ನಿಲುವಳಿ ಸೂಚನೆ ಮೂಲಕ ಪ್ರಶ್ನಿಸಿದ್ದೇವೆ ಎಂದು ತಿಳಿಸಿದರು
				
															
                    
                    
                    
                    
                    































