ಹೆಣ್ಣುಮಕ್ಕಳು ಸಾಮಾನ್ಯವಾಗಿ ಮುಟ್ಟಿನ ಸಮಯದಲ್ಲಿ ನೋವನ್ನು ಅನುಭವಿಸಿಯೇ ಇರುತ್ತಾರೆ, ಆ ಸಮಯದಲ್ಲಿ ಮೈ-ಕೈ ನೋವು, ತಲೆ ನೋವು, ಹೊಟ್ಟೆನೋವು, ಸುಸ್ತು ಸಾಮಾನ್ಯವಾಗಿ ಕಾಡುವ ತೊಂದರೆಯಾಗಿದೆ. ಆದರೆ ಕೆಲವೊಬ್ಬರಿಗೆ ಸಣ್ಣ ಪ್ರಮಾಣದಲ್ಲಿ ಇನ್ನೂ ಕೆಲವರು ದೊಡ್ಡ ಪ್ರಮಾಣದಲ್ಲಿ ನೋವನ್ನು ಅನುಭವಿಸುತ್ತಾರೆ. ನೀವು ಕೂಡ ಪ್ರತಿ ತಿಂಗಳು ಮುಟ್ಟಿನ ಸಂದರ್ಭದಲ್ಲಿ ನೋವು ಅನುಭವಿಸುತ್ತಿದ್ದರೆ ಈ ಕೆಲಸ ಮಾಡಿ.
ಯೋಗ:
ಯೋಗ ಮಾಡುವುದರಿಂದ ಮುಟ್ಟಿನ ಸಮಯದಲ್ಲಾಗುವ ನೋವನ್ನು ಕಡಿಮೆ ಮಾಡಬಹುದು, ಯೋಗದಲ್ಲಿ ಎಲ್ಲಾ ಆಸನಗಳನ್ನು ಮಾಡಲಾಗದಿದ್ದರೂ ಕೆಲವು ಆಸನಗಳು ತುಂಬಾ ಉಪಯುಕ್ತವಾಗಿರುತ್ತದೆ. ಗೋಮುಖಾಸನ, ಭುಜಂಗಾಸನ ಹಾಗೂ ಜಾನು ಶಿರಸಾಸನವನ್ನು ಮಾಡಿ.
ನೀರಿನಲ್ಲಿ ನೆನೆಸಿದ ಒಣದ್ರಾಕ್ಷಿ ತಿನ್ನಿ
ಮುಟ್ಟಿನ ಸಮಯದಲ್ಲಿ ನೀರಿನಲ್ಲಿ ನೆನೆಸಿದ ಒಣದ್ರಾಕ್ಷಿಯನ್ನು ಬೆಳಗಿನ ಜಾವ ಸೇವಿಸುವುದರಿಂದ ನೋವನ್ನು ಕಡಿಮೆ ಮಾಡಬಹುದು.
ಬಾಳೆಹಣ್ಣು ಸೇವನೆ
ಬಾಳೆಹಣ್ಣನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಹಾಗೂ ವಿಟಮಿನ್ ಬಿ6 ಅಂಶ ಹೆಚ್ಚಿದ್ದು ನೋವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗುತ್ತದೆ.
ಬೆಳ್ಳುಳ್ಳಿ ಸೇವನೆ
ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ನೋವಿಗೆ ಬೆಳ್ಳುಳ್ಳಿ ಉತ್ತಮ ಪರಿಹಾರ. ಬೆಳ್ಳುಳ್ಳಿಯನ್ನು ನೀರಿನಲ್ಲಿ ಕುದಿಸಿ. ಆ ನೀರನ್ನು ಬಿಸಿ ಇರುವಾಗಲೇ ಕುಡಿಯುವುದರಿಂದ ಹೊಟ್ಟೆ ನೋವಿನ ಸಮಸ್ಯೆ ಪರಿಹಾರಗೊಳ್ಳುತ್ತದೆ.
ತೆಂಗಿನ ಎಣ್ಣೆ ಮಸಾಜ್
ಹೊಟ್ಟೆಗೆ ತೆಂಗಿನ ಎಣ್ಣೆ ಹಚ್ಚಿಕೊಳ್ಳುವ ಮೂಲಕ ನಿಧಾನವಾಗಿ ಮಸಾಜ್ ಮಾಡಿ. ಇದರಿಂದ ಹೊಟ್ಟೆ ನೋವು ಜತೆಗೆ ಹೊಟ್ಟೆಯ ಭಾಗದಲ್ಲಿ ಸ್ನಾಯು ಸೆಳೆತಂದತಹ ಸಮಸ್ಯೆಗಳಿಗೆ ಪರಿಹಾರವಾಗುತ್ತದೆ.
ಬಿಸಿ ನೀರಿನ ಬ್ಯಾಗ್
ಬಿಸಿ ನೀರಿನ ಬ್ಯಾಗ್ ಅನ್ನು ಹೊಟ್ಟೆಯ ಮೇಲಿರಿಸುವುದರಿಂದ ನೋವು ಕಡಿಮೆಯಾಗಲಿದೆ. ಹಾಗೆಯೇ ಬಿಸಿ ನೀರನ್ನು ಕುಡಿಯುವುದು ಹಾಗೂ ಬಿಸಿನೀರಿನಲ್ಲಿ ಸ್ನಾನ ಮಾಡಿ.
ಡಾರ್ಕ್ ಚಾಕೊಲೇಟ್
ಮುಟ್ಟಿನ ಸಮಯದಲ್ಲಿ ಡಾರ್ಕ್ ಚಾಕೊಲೇಟ್ಗಳನ್ನು ಸೇವಿಸಿ ಬಾದಾಮಿ ಹಾಗೂ ಪೋಷಕಾಂಶಯುಕ್ತ ಆಹಾರವನ್ನು ಸೇವಿಸಬೇಕು. ನೀರು ಹೆಚ್ಚಿನ ಪ್ರಮಾಣದಲ್ಲಿ ಕುಡಿಯಬೇಕು.
ಕರಿ ಎಳ್ಳಿನ ಸೇವನೆ
ಕರಿ ಎಳ್ಳಿನ ಸೇವನೆಯ ಮೂಲಕ ಹೊಟ್ಟೆ ನೋವಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಕರಿ ಎಳ್ಳಿನ ಪುಡಿಯನ್ನು ನೀರಿಗೆ ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸುವುದರ ಮೂಲಕ ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ನೋವಿನಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.