ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಗೆ ಮುಡಾ ಪ್ರಕರಣ ಎದುರಾದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಒಂದಿಷ್ಟು ಸಂಚಲನ ಸೃಷ್ಟಿಸಿದೆ. ಅದರಲ್ಲೂ ಕೈ ಪಕ್ಷದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಸಿದ್ದರಾಮಯ್ಯ ಮುಡಾ ಪ್ರಕರಣದ ಕಾನೂನು ಹೋರಾಟಕ್ಕೆ ನಮ್ಮದೆಲ್ಲ ಬೆಂಬಲ ಎಂದು ಹೇಳುತ್ತಲ್ಲೇ ಕೈ ಪಕ್ಷದಲ್ಲಿ ಗೌಪ್ಯವಾಗಿ ಪ್ರತ್ಯೇಕ ಸಭೆಗಳು ಜೋರಾಗಿ ನಡೆಯುತ್ತಿದೆ. ಅದರಲ್ಲೂ ಅಹಿಂದ ವರ್ಗದ ಸಚಿವರು ಪ್ರತ್ಯೇಕ ಸಭೆಗಳು ಸೇರುತ್ತಿರೋದ್ರಿಂದ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸಚಿವರಾದ ಸತೀಶ್ ಜಾರಕಿಹೊಳಿ, ಜಿ.ಪರಮೇಶ್ವರ್, ಹೆಚ್ ಸಿ ಮಹದೇವಪ್ಪ ಇತ್ತೀಚೆಗೆ ಸಭೆ ಸೇರಿ ಚರ್ಚೆ ನಡೆಸಿದ್ದಾರೆ. ಅದರಲ್ಲೂ ಸಚಿವ ಸತೀಶ್ ಜಾರಕಿಹೊಳಿ ತುಸು ಹೆಚ್ಚು ಆಕ್ಟೀವ್ ಆಗಿದ್ದಾರೆ ಎಂದು ಅವರದ್ದೇ ಪಕ್ಷದ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆಯೂ ಸಮಾಲೋಚನೆ ನಡೆಸಿ ಬಂದಿದ್ದಾರೆ ಸತೀಶ್ ಜಾರಕಿಹೊಳಿ, ಮಲ್ಲಿಕಾರ್ಜುನ ಖರ್ಗೆ ಜೊತೆ ಚರ್ಚೆ ನಡೆಸಿ ಬಂದ ಬಳಿಕ ತುಮಕೂರಿಗೆ ತೆರಳಿ ಪರಮೇಶ್ವರ್ ಅವರನ್ನೂ ಸಹ ಭೇಟಿಯಾಗಿ ಚರ್ಚೆ ನಡೆಸಿರೋದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಮುಡಾ ಪ್ರಕರಣದಲ್ಲಿ ಕಾನೂನು ಕುಣಿಕೆಯಲ್ಲಿ ಸಿಲುಕಿಕೊಂಡು ಹೋರಾಟ ನಡೆಸುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಬದಲಾವಣೆ ಚರ್ಚೆಯೂ ಪಕ್ಷದ ಒಳಗೊಳಗೆ ನಡೆಯುತ್ತಿದೆ. ಇದರ ನಡುವೆ ಹೀಗೆ ಪ್ರತ್ಯೇಕ ಸಭೆಗಳು ಮತ್ತು ಹೈಕಮಾಂಡ್ ನಾಯಕರನ್ನ ಹೋಗಿ ಭೇಟಿಯಾಗಿ ಬರುತ್ತಿರೋದು ಪಕ್ಷದ ಪಡಸಾಲೆಯಲ್ಲಿ ದೊಡ್ಡ ಪಟ್ಟದ ಚರ್ಚೆಯಾಗುತ್ತಿದೆ. ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆಯಾದರೆ ದಲಿತ ವರ್ಗಕ್ಕೆ ಸಿಎಂ ಸ್ಥಾನ ಸಿಗಬೇಕು ಎಂಬುದು ಕೈ ಪಕ್ಷದಲ್ಲಿರುವ ಅಹಿಂದ ನಾಯಕರ ಆಗ್ರಹವಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಇತ್ತಿಚೆಗೆ ಪ್ರತ್ಯೇಕ ಸಭೆಗಳು ಮತ್ತು ಹೈಕಮಾಂಡ್ ನಾಯಕರನ್ನ ಭೇಟಿಯಾಗಿ ಬರ್ತಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಸಿಎಂ ಸಿದ್ದರಾಮಯ್ಯ ಅವರನ್ನ ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡ್ತಾರೋ ಇಲ್ವೋ ಗೊತ್ತಿಲ್ಲ ಆದ್ರೆ ಸಚಿವ ಸತೀಶ್ ಜಾರಕಿಹೊಳಿ ಅಂತೂ ಸಭೆ ಅದು ಇದು ಎಂದು ಫುಲ್ ಆಕ್ಟೀವ್ ಆಗಿದ್ದಾರೆ.
