‘ಮುಡಾ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ತಾರ್ಕಿಕ ಅಂತ್ಯಕ್ಕೆ ಒಯ್ಯುತ್ತೇವೆ, ಸದನದಲ್ಲಿ ಸಿಎಂ ಉತ್ತರಕ್ಕೆ ವಿಜಯೇಂದ್ರ ಆಗ್ರಹ’

ಬೆಂಗಳೂರು: ಸಾವಿರಾರು ಕೋಟಿ ಮೊತ್ತದ ಮುಡಾ ಹಗರಣ ಮತ್ತು ದಲಿತರ ಹಣವನ್ನು ಲೂಟಿ ಮಾಡಿದ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದನದಲ್ಲಿ ಉತ್ತರ ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದರು.

ಬಿ.ವೈ. ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ನೇತೃತ್ವದಲ್ಲಿ ಇಂದು ಶಾಸಕರ ಭವನದ ಮಹರ್ಷಿ ವಾಲ್ಮೀಕಿ ಪ್ರತಿಮೆ ಬಳಿ ಬಿಜೆಪಿ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮುಡಾ ಹಗರಣದ ತನಿಖೆಯನ್ನು ನಿವೃತ್ತ ನ್ಯಾಯಾಧೀಶರಿಂದ ನಡೆಸಿದರೆ ಸಾಲದು; ಮುಖ್ಯಮಂತ್ರಿಗಳಿಗೆ ನಿಜವಾಗಿ ತಾಕತ್ತಿದ್ದರೆ ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ವಿಜಯೇಂದ್ರ ಅವರು ಒತ್ತಾಯಿಸಿದರು.

Advertisement

ಮುಖ್ಯಮಂತ್ರಿಗಳ ಕುಟುಂಬವೇ ಪಾಲುದಾರರಿದ್ದು, ಸಾವಿರಾರು ಕೋಟಿ ಬೆಲೆಬಾಳುವ ನಿವೇಶನಗಳಿಗೆ ಸಂಬಂಧಿಸಿ ಮೈಸೂರು ಮುಡಾ ಹಗರಣ ನಡೆದಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲೇಬೇಕು ಎಂದು ಆಗ್ರಹಿಸಿದರಲ್ಲದೆ, ಮುಡಾ ಹಗರಣದ ಸಿಬಿಐ ತನಿಖೆಗೆ ಆಗ್ರಹಿಸಿ ಸದನದ ಹೊರಗೆ ಹೋರಾಟ ನಡೆಸಿದ್ದೇವೆ; ಸದನದ ಒಳಗೆ ಕೂಡ ಹೋರಾಟ ಮುಂದುವರೆಯಲಿದೆ ಎಂದು ಪ್ರಕಟಿಸಿದರು.

ಸಿದ್ದರಾಮಯ್ಯನವರು ದಲಿತರ ಹೆಸರು ಹೇಳಿಕೊಂಡು, ಪರಿಶಿಷ್ಟ ವರ್ಗ, ಪರಿಶಿಷ್ಟ ಪಂಗಡದವರಿಗೆ ನ್ಯಾಯ ಕೊಡುವುದಾಗಿ ಹೇಳಿಕೊಂಡು ಅಧಿಕಾರಕ್ಕೆ ಬಂದವರು; ಆದರೆ, ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಲೂಟಿ ಮಾಡಿದ್ದಲ್ಲದೆ, ಅದೇ ಮೊತ್ತದಲ್ಲಿ ಲೋಕಸಭಾ ಚುನಾವಣೆ ನಡೆಸಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಕಾಂಗ್ರೆಸ್ ಸರಕಾರದ ಬಂಡವಾಳ ಈ ಮೂಲಕ ಬಯಲಾಗಿದೆ ಎಂದು ಟೀಕಿಸಿದರು. ಈ ಹಗರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದೂ ಒತ್ತಾಯ ಮಾಡಿದರು.

ಮುಖ್ಯಮಂತ್ರಿಗಳು ಆ ಸ್ಥಾನದಲ್ಲಿ ಕೂರಲು ನೈತಿಕತೆಯನ್ನು ಕಳಕೊಂಡಿದ್ದಾರೆ. ಸಮಯ ವ್ಯರ್ಥ ಮಾಡದಿರಿ; ನಿಮ್ಮ ಮಾಜಿ ಸಚಿವ ನಾಗೇಂದ್ರ ಅವರು ಇ.ಡಿ. ಕಸ್ಟಡಿಯಲ್ಲಿದ್ದಾರೆ. ನಿಗಮದ ಅಧ್ಯಕ್ಷರೂ ಆದ ಶಾಸಕ ದದ್ದಲ್ ಕಾಣೆಯಾಗಿದ್ದಾರೆ. ಹಾಗಿದ್ದರೆ ಸಿಎಂ ಉತ್ತರ ಕೊಡಬೇಕಲ್ಲವೇ ಎಂದು ವಿಜಯೇಂದ್ರ ಅವರು ಪ್ರಶ್ನೆಯನ್ನು ಮುಂದಿಟ್ಟರು. ಅಧಿಕಾರಿಗಳು ಸೇರಿಕೊಂಡು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ಮಾಡಿದ್ದಾಗಿ ಹೇಳುವ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಅವರ ಶಾಸಕರಿಗೆ ಕ್ಲೀನ್ ಚಿಟ್ ಕೊಡುವ ದುಸ್ಸಾಹಸ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ಕಾಂಗ್ರೆಸ್ಸಿಗರು ಭ್ರಷ್ಟಾಚಾರರಹಿತ ಆಡಳಿತ ಕೊಡುವುದಾಗಿ ಹೇಳಿ ಜನರ ಕಿವಿಗೆ ಹೂವು ಇಟ್ಟಿದ್ದರು. ಆದರೆ, ಅವರ ಬಂಡವಾಳ ಬಯಲಾಗಿದೆ ಎಂದು ಟೀಕಿಸಿದರು.

ಮುಖ್ಯಮಂತ್ರಿಗಳು ನಿಜವಾಗಿ ಪ್ರಾಮಾಣಿಕರೇ ಆಗಿದ್ದರೆ, ನಿಷ್ಪಕ್ಷಪಾತ ತನಿಖೆ ಆಗಬೇಕೆಂದಿದ್ದರೆ ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ಅಲ್ಲದೆ, ವಾಲ್ಮೀಕಿ ನಿಗಮದ ಹಣವನ್ನು ಲೋಕಸಭಾ ಚುನಾವಣೆಗೆ ಬಳಸಿದ ಕುರಿತು ಇ.ಡಿ. ತಿಳಿಸಿದ ಹಿನ್ನೆಲೆಯಲ್ಲಿ ಇವೆರಡೂ ಹಗರಣಗಳ ಬಗ್ಗೆ ಸದನದಲ್ಲಿ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement