ಬೆಂಗಳೂರು: ಮುಡಾ ನಿವೇಶನ ಪಡೆದುಕೊಳ್ಳುವಲ್ಲಿ ನಾನಾಗಲಿ ನನ್ನ ಕುಟುಂಬವಾಗಲಿ. ಯಾವುದೇ ಪ್ರಯತ್ನ ಮಾಡಿಲ್ಲ. ಇದರಲ್ಲಿ ನಮ್ಮ ಯಾವುದೇ ಪಾತ್ರ ಇಲ್ಲ ಎಂದು ಪತ್ರ ಬರೆದಿದ್ದ ಸಿಎಂ ಖಂಡತುಂಡವಗಿ ಹೇಳಿದ್ದರು. ಆದರೆ ಸಿಎಂ ಹೇಳಿಕೆಯನ್ನು ಬುಡಮೇಲು ಮಾಡುವಂತೆ ಒಂದೊಂದೇ ದಾಖಲೆಗಳು ಆಚೆ ಬರುತ್ತಿವೆ. 2014ರಲ್ಲಿ ಸಿದ್ದರಾಮಯ್ಯ ಪತ್ನಿ ಮುಡಾಗೆ ಮನವಿ ಸಲ್ಲಿಸಿ, ನನ್ನ ಜಮೀನಿನಲ್ಲಿ ಮುಡಾ ನಿವೇಶನ ಮಾಡಿ ಹಂಚಿದೆ. ಇದಕ್ಕೆ ಪರಿಹಾರ ನೀಡುವಂತೆ ಕೋರಿದ್ದರು. ಈ ವೇಳೆ ಮಾರುಕಟ್ಟೆ ದರ ಅಥವಾ 40:60 ಅನುಪಾತದಲ್ಲಿ ಪರಿಹಾರ ನೀಡಲು ಮುಡಾ ನಿರ್ಧರಿಸಿತ್ತು. ಇದಕ್ಕೆ ಪಾರ್ವತಿಯವರು ಬದಲಿ ಜಮೀನಿನನ್ನೇ ಕೊಡಬೇಕೆಂದು ಒತ್ತಾಯಿಸಿದ್ದರು. ಈ ಕುರಿತು ಸಭೆಯ ನಡಾವಳಿಯಲ್ಲಿ ನಮೂದಾಗಿದೆ. ಈ ಹಿಂದೆ ಮುಡಾಗೆ ಪತ್ನಿ ಪತ್ರವನ್ನೇ ಬರೆದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಬಹಿರಂಗವಾಗಿಯೇ ತಿಳಿಸಿದ್ದರು. ಆದರೆ ಪತ್ನಿ ಮುಡಾಗೆ ಪತ್ರ ಬರೆದ ಬಗ್ಗೆ ರಾಜ್ಯಪಾಲರಿಗೆ ನೀಡಿದ ಉತ್ತರದಲ್ಲಿ ಸಿಎಂ ಉಲ್ಲೇಖಿಸಿದ್ದರು. ಇನ್ನೊಂದು ಮುಡಾದ ತಿಳಿವಳಿಕೆ ಪತ್ರದಲ್ಲಿ, ಪಾರ್ವತಿಯವರ ಕೋರಿಕೆ ಪತ್ರದ ಬಗ್ಗೆ ಉಲ್ಲೇಖಿಸಿ, 50:50 ಅನುಪಾತದಲ್ಲಿ ನಿವೇಶನ ಕೊಡಬೇಕೆಂಬ ಕೋರಿಕೆಯ ಕುರಿತು ಪ್ರಸ್ತಾಪಿಸಿ, 3.16 ಎಕರೆ ಜಮೀನಿಗೆ ಸಂಬಂಧಿಸಿದ ಹಕ್ಕು ದಾಖಲಾತಿಗಳನ್ನು ಹಾಜರುಪಡಿಸಿ ಮೂರು ದಿನದೊಳಗೆ ಪರಿತ್ಯಾಜನಾ ಪತ್ರ ಮಾಡಿಸಿಕೊಡುವಂತೆ ಹಾಗೂ ಮೂಲ ದಾಖಲಾತಿಗಳನ್ನು ಹಾಜರುಪಡಿಸಿ ಪ್ರಾಧಿಕಾರದ ಸುಪರ್ದಿಗೆ ಸಲ್ಲಿಸುವಂತೆ ಮುಡಾ ವಿಶೇಷ ಭೂಸ್ವಾಧೀನಾಧಿಕಾರಿ ಪಾರ್ವತಿ ಅವರಿಗೆ ಸೂಚಿಸಿದ್ದರು. ಇದೇ ರೀತಿ ಮುಡಾ ನಡಾವಳಿಯ ಇನ್ನೊಂದು ಕಂತಿನ ದಾಖಲೆ ಇಷ್ಟರಲ್ಲೇ ಬಿಡುಗಡೆಯಾಗಲಿದೆ. ಈಗಾಗಲೇ ವೈಟ್ನರ್ ಬಳಕೆ ಮಾಡಿದ ದಾಖಲೆ ಹರಿದಾಡುತ್ತಿದ್ದು ಮತ್ತೊಂದು ದಾಖಲೆಯಲ್ಲಿ ಮೃತ ವ್ಯಕ್ತಿ ಹೆಸರಿನಲ್ಲಿ ಭೂಸ್ವಾಧೀನ ಮಾಡಿರುವುದಕ್ಕೆ ಸಂಬಂಧಿಸಿದ ದಾಖಲೆ ಬಹಿರಂಗವಾಗಿದೆ. ಇನ್ನು ಇದೇ ವಿಚಾರ ಇಟ್ಟುಕೊಂಡು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ.