ಬೆಂಗಳೂರು: ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಮುತ್ತಪ್ಪ ರೈ ಒಡೆತನದ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಪಾಲುದಾರಿಕೆ ಗಲಾಟೆ ನಡೆದು ಇದೀಗ ರಾಜಿ ಮಾತುಕತೆಯ ಮೂಲಕ ಕೋರ್ಟ್ ಸಮ್ಮುಖದಲ್ಲಿ ಇತ್ಯರ್ಥಗೊಂಡಿದೆ.
ರೈ ಒಡೆತನದ ಅಂದಾಜು 300 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಪಾಲಿಗಾಗಿ ಪುತ್ರರಾದ ರಿಕ್ಕಿ ರೈ ಮತ್ತು ರಾಕಿ ರೈ ವಿರುದ್ಧ ಮುತ್ತಪ್ಪ ರೈ ಎರಡನೆ ಪತ್ನಿ ಅನುರಾಧಾ ರೈ ನ್ಯಾಯಾಲಯದಲ್ಲಿ ಕೇಸು ದಾಖಲಿಸಿದ್ದರು. ಒಟ್ಟು ಆಸ್ತಿಯಲ್ಲಿ ಮೂರನೇ ಒಂದು ಪಾಲು ನೀಡುವಂತೆ ಕೇಳಿಕೊಂಡಿದ್ದರು.
ಇದೀಗ ನಾಲ್ಕು ವರ್ಷಗಳ ನಂತರ ರಾಜಿ ಮಾತುಕತೆಯ ಮೂಲಕ ವಿವಾದ ಪರಿಹರಿಸಿಕೊಳ್ಳಲು ರೈ ಪುತ್ರರು ಮತ್ತು ಎರಡನೇ ಪತ್ನಿ ಪರಸ್ಪರ ಸಮ್ಮತಿ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸೆ.24ರಂದು ನ್ಯಾಯಾಲಯಕ್ಕೆ ಅಧಿಕೃತ ಮಾಹಿತಿ ರವಾನಿಸಲಾಗಿತ್ತು. ನ್ಯಾಯಾಧೀಶರ ಮಧ್ಯಸ್ಥಿಕೆಯಲ್ಲಿಯೇ ವಿವಾದ ಪರಿಹಾರವಾಗಿದೆ.
ಅನುರಾಧಾ ರೈ ಪರವಾಗಿ ಹರೀಶ್ ಅಂಡ್ ಅಸೋಸಿಯೇಟ್ಸ್ ವಕಾಲತ್ತು ವಹಿಸಿದ್ದರೂ ಖ್ಯಾತ ನ್ಯಾಯವಾದಿ ಬಿ.ವಿ.ಆಚಾರ್ ವಾದ ಮಂಡಿಸಿದರೆ, ರೈ ಪುತ್ರರ ಪರವಾಗಿ ರವಿಶಂಕರ್ ವಾದ ಮಂಡಿಸಿದರು.
ಬೆಂಗಳೂರಿನ ಗಂಟಿಗಾನಹಳ್ಳಿ ಮತ್ತು ಮತ್ತೊಂದು ಆಸ್ತಿಯ ಕೇಸ್ ಒಂದರಲ್ಲಿ ಹೈಕೋರ್ಟ್ ನಲ್ಲಿ ಹಿನ್ನಡೆಯಾದ ಕಾರಣಕ್ಕೆ ಅನುರಾಧಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದಾದ ಕೆಲವೇ ದಿನಗಳ ನಂತರ ನಡೆದ ದಿಢೀರ್ ಬೆಳವಣಿಗೆಯೊಂದರಲ್ಲಿ ರಾಜಿ ಮಾತುಕತೆ ನಿರ್ಧಾರಕ್ಕೆ ಬರಲಾಗಿತ್ತು. ಮೌಕಿಕವಾಗಿ ನಡೆದ ವಿಚಾರಣೆಯ ವೇಳೆ ನ್ಯಾಯಾಲಯ ಇದನ್ನು ಒಪ್ಪಿತ್ತು.
ದೇವನಹಳ್ಳಿಯಲ್ಲಿರುವ 5 ಎಕರೆ ಜಮೀನು, ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ತೊನ್ನೂರು ಕೆರೆ ಎಂಬಲ್ಲಿರುವ 26 ಎಕರೆ ಕೃಷಿ ಭೂಮಿ ಮತ್ತು ಮೈಸೂರಿನ ಚಾಮುಂಡಿ ಬೆಟ್ಟ ರಸ್ತೆ ಬಳಿಯಲ್ಲಿರುವ ಬೃಹತ್ ಬಂಗಲೆ ಎರಡನೇ ಪತ್ನಿ ಅನುರಾಧಾಗೆ ಹಸ್ತಾಂತರವಾಗಲಿದೆ. ಇದರೊಂದಿಗೆ 7 ಕೋಟಿ ರೂ. ನಗದು ದೊರೆಯಲಿದೆ. ಅಂದಾಜು 50 ಕೋಟಿ ರೂ.ಮೌಲ್ಯದ ಆಸ್ತಿ ಮತ್ತು ನಗದು ಅನುರಾಧಾ ಪಾಲಿಗೆ ಬರಲಿದೆ.
ರೈ ಕೊನೆಯ ದಿನಗಳಲ್ಲಿ ದೇವನಹಳ್ಳಿಯ ಐದು ಎಕರೆ ಜಮೀನು ಮತ್ತು ಮೈಸೂರಿನಲ್ಲಿನ ಬಂಗಲೆಯನ್ನು ಬಿಟ್ಟು ಕೊಡುವುದಾಗಿ ಭರವಸೆ ನೀಡಿದ್ದರು. ಇದಕ್ಕೆ ಅನುರಾಧಾ ಸಮ್ಮತಿ ಇತ್ತು. ಆದರೆ ಆ ಬಳಿಕ ನಡೆದ ಕೆಲವೊಂದು ಬೆಳವಣಿಗೆಗಳಲ್ಲಿ ರೈ- ಅನುರಾಧ ಮಧ್ಯೆ ಬಿರುಕು ಏರ್ಪಟ್ಟಿತ್ತು. ರೈ ನಿಧನದ ನಂತರ ಬಹಿರಂಗಗೊಂಡ ವಿಲ್ ನಲ್ಲಿ ತಮಗೆ ಯಾವುದೇ ಪಾಲು ದೊರೆಯದಿರುವುದನ್ನು ಮನಗಂಡ ಅನುರಾಧಾ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಬೆಂಗಳೂರು ಹೊರವಲಯದ ಬಿಡದಿಯಲ್ಲಿ 2.16 ಎಕರೆ ಸ್ಥಳದಲ್ಲಿರುವ 23 ಸಾವಿರ ಚದರ ಅಡಿ ಮನೆ, ಸದಾಶಿವ ನಗರದಲ್ಲಿರುವ 2 ಫ್ಲಾಟ್, ಬೆಂಗಳೂರಿನ ಆರ್.ಎಂವಿ ಎಕ್ಸೆನ್ಸನ್ ನಲ್ಲಿರುವ ಎರಡು ಕೋಟಿ ರೂ. ಮೌಲ್ಯದ ಫ್ಯಾಟ್, ದೇವನಹಳ್ಳಿ, ಸಕಲೇಶಪುರ, ಹಾಸನ, ಮೈಸೂರು, ಶಿವಮೊಗ್ಗ, ಮಂಡ್ಯ, ಹೆಗ್ಗಡದೇವನಕೋಟೆ, ಮಡಿಕೇರಿಗಳಲ್ಲಿರುವ ಅಂದಾಜು 300 ಎಕರೆ ಜಮೀನಿನ ಮೂರನೇ ಒಂದಂಶವನ್ನು ನೀಡುವಂತೆ ಕೇಸು ದಾಖಲಿಸಿದ್ದರು.
ತಂದೆ ಮುತ್ತಪ್ಪ ರೈ ಜತೆಗೆ ಮಕ್ಕಳಾದ ರಿಕ್ಕಿ ರೈ ಹಾಗೂ ರಾಕಿ ರೈ ಮುತ್ತಪ್ಪ ರೈ ಒಡೆತನದಲ್ಲಿದ್ದ ಎರಡು ಮರ್ಸಿಡಿಸ್ ಬೆಂಜ್ ಕಾರು, ಎರಡು ಲ್ಯಾಂಡ್ ಕ್ರೂಸರ್, ಆಡಿ. ಫಾರ್ಚುನರ್ ಸಹಿತ 11 ಐಷಾರಾಮಿ ಕಾರುಗಳು, ಕೆನರಾ ಮತ್ತು ವಿಜಯ ಬ್ಯಾಂಕ್‌ನಲ್ಲಿರುವ ಠೇವಣಿ ಹಣದ ಮೇಲು ಅನುರಾಧ ಹಕ್ಕು ಪ್ರತಿಪಾದಿಸಿದ್ದರು. ಆಸ್ತಿ ಪಾಲುದಾರಿಕೆ ಕುರಿತಂತೆ ನ್ಯಾಯಾಲಯಕ್ಕೆ 700 ಪುಟಗಳ ದಾಖಲೆಯನ್ನು ಅನುರಾಧಾ ಸಲ್ಲಿಸಿದ್ದರು. ಇದರ 24 ಪ್ರತಿಗಳನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿತ್ತು.
ಈ ನಡುವೆ ಸಕಲೇಶಪುರದ ಬಾಳುಪೇಟೆ ಎಂಬಲ್ಲಿ ಮುತ್ತಪ್ಪ ರೈ ಒಡೆತನದ 200 ಎಕರೆ ಜಮೀನನ್ನು ಎಂಆರ್‌ಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರಾದ ಪ್ರಕಾಶ್ ಶೆಟ್ಟಿ ಖರೀದಿಸಿದ್ದಾರೆ. ಈ ಆಸ್ತಿಯ ಮೇಲೂ ಅನುರಾಧ ಕೇಸು ದಾಖಲಿಸಿದ್ದರು. ಪ್ರಕಾಶ್ ಶೆಟ್ಟಿ ಈ ವಿವಾದವನ್ನು ಸೌಹಾರ್ದ ಯುತವಾಗಿ ಬಗೆಹರಿಸಿದ ನಂತರ ಕೇಸು ಹಿಂದೆಗೆದುಕೊಂಡಿದ್ದಾರೆ. ಪರಿಹಾರವನ್ನು ಪಡೆದುಕೊಂಡಿದ್ದಾರೆ.
ಮುತ್ತಪ್ಪ ರೈ ಮೊದಲನೇ ಪತ್ನಿ ರೇಖಾ ರೈ ನಿಧನದ ಸುದೀರ್ಘ ಸಮಯಗಳ ನಂತರ 2016ರ ನವಂಬರ್ 27ರಂದು ಅನುರಾಧಾರನ್ನು ಮುತ್ತಪ್ಪ ರೈ ವಿವಾಹವಾಗಿದ್ದರು. 2017ರ ಜೂನ್ ನಲ್ಲಿ ಹಿಂದು ವಿವಾಹ ಕಾಯ್ದೆ ಅನ್ವಯ ರಾಮನಗರ ಸಬ್ ರಿಜಿಸ್ಟರ್ ಕಚೇರಿಯಲ್ಲಿ ವಿವಾಹವನ್ನು ನೋಂದಣಿ ಮಾಡಿಸಲಾಗಿತ್ತು. ಸದ್ಯ ಅನುರಾಧಾ ಬೆಂಗಳೂರಿನ ಸಹಕಾರಿ ನಗರದಲ್ಲಿ ಮೊದಲ ಪತಿ ನಿರ್ಮಿಸಿರುವ ನಿವಾಸದಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಸಮಾಜಮುಖ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದಾರೆ.