ಬೆಂಗಳೂರು: ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ (ಎಸ್ಜೆಎಂ) ವಿದ್ಯಾಪೀಠಕ್ಕೆ ಹೊಸ ಅಧ್ಯಕ್ಷರನ್ನು ನೇಮಕ ಮಾಡುವತನಕ, ಸದ್ಯ ಮೇಲುಸ್ತುವಾರಿ ಸಮಿತಿಯ ಜವಾಬ್ದಾರಿ ಹೊತ್ತಿರುವ ಬಸವಪ್ರಭು ಸ್ವಾಮೀಜಿಯ ಆಡಳಿತ ಮತ್ತು ನಿರ್ವಹಣೆಯೇ ಮುಂದುವರಿಯಲಿದ್ದು, ಇದು ಚಿತ್ರದುರ್ಗ ಜಿಲ್ಲಾ ಪ್ರಧಾನ ನ್ಯಾಯಾಧೀಶರ ನಿಗಾದಲ್ಲೇ ಇರಬೇಕು ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಈ ಸಂಬಂಧ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಏಳು ಮೇಲ್ಮನವಿಗಳ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಎಂ.ಜಿ.ಎಸ್.ಕಮಾಲ್ ಅವರಿದ್ದ ವಿಭಾಗೀಯ ನ್ಯಾಯಪೀಠವು ಕಾಯ್ದಿರಿಸಿದ್ದ ತನ್ನ ತೀರ್ಪ ಹೇಳಿದೆ. ವಿದ್ಯಾಪೀಠದ ಆಡಳಿತದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಂತಹ ಹೊಸ ಅಧ್ಯಕ್ಷರನ್ನು ನೇಮಕ ಮಾಡಬೇಕು. ಹೊಸ ಅಧ್ಯಕ್ಷರನ್ನು ನೇಮಕ ಮಾಡಿದ ಕ್ಷಣದಿಂದಲೇ ಪಿಡಿಜೆ ಪಾತ್ರ ಕೊನೆಗೊಳ್ಳುತ್ತದೆ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
ಎಸ್ಜೆಎಂ ವಿದ್ಯಾಪೀಠವು ನೋಂದಾಯಿತ ಸೊಸೈಟಿಯಾಗಿದ್ದು, ಇದರ ಅಧ್ಯಕ್ಷರು ಮಾತ್ರವೇ ನಿರ್ಧಾರಗಳನ್ನು ತೆಗೆದುಕೊಳ್ಳಬಹುದಾಗಿದೆ. ಆದರೆ, ಈ ವಿದ್ಯಾಪೀಠದ ಅಧ್ಯಕ್ಷ ಎನಿಸಿರುವ ಮಠಾಧಿಪತಿ ಶಿವಮೂರ್ತಿ ಶರಣರು ಸದ್ಯ ಜೈಲಿನಲ್ಲಿರುವ ಕಾರಣ ನೂತನ ಅಧ್ಯಕ್ಷರ ನೇಮಕವಾಗಬೇಕಿದೆ. ಈ ನೇಮಕಾತಿ ಆಗುವ ತನಕ, ಹಂಗಾಮಿ ಆಡಳಿತಾಧಿಕಾರಿಯಾಗಿ ಜಿಲ್ಲಾ ನ್ಯಾಯಾಧೀಶರು ವಿದ್ಯಾಪೀಠದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಾರೆ ಎಂದು ನಿರ್ದೇಶಿಸುವ ಮೂಲಕ ಎಲ್ಲ ಮೇಲ್ಮನವಿಗಳನ್ನು ವಿಲೇವಾರಿ ಮಾಡಿದೆ.