ರಾಮನಗರ: ಮುಸ್ಲಿಂ ಬಾಂಧವರು ಎಚ್ಚರಿಕೆಯಿಂದ ಇರಿ. ಕೆಲ ಕಾಂಗ್ರೆಸ್ ನಾಯಕರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಮತಕ್ಕಾಗಿ ಒಂದು ಸಮಾಜವನ್ನ ಓಲೈಕೆ ಮಾಡುವ ಅವಶ್ಯಕತೆಯಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಸಂಬಂಧ ಬಿಡದಿಯ ತೋಟದ ಮನೆಯಲ್ಲಿ ಭಾನುವಾರ (ಅ.1) ಸಭೆ ನಡೆಸಿ ಮಾತನಾಡಿದ ಅವರು, ಬಿಜೆಪಿ ಜೊತೆಗಿನ ಮೈತ್ರಿ ಸಂಬಂಧಕ್ಕೆ ಸರ್ವಾನುಮತದಿಂದ ಒಪ್ಪಿಗೆ ನೀಡಲಾಗಿದೆ ಎಂದು ಘೋಷಣೆ ಮಾಡಿದರು. ಬಳಿಕ ಮಾತನಾಡಿ, ಮುಸ್ಲಿಂ ಬಾಂಧವರು ಎಚ್ಚರಿಕೆಯಿಂದ ಇರಿ, ಕೆಲ ಕಾಂಗ್ರೆಸ್ ನಾಯಕರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಮತಕ್ಕಾಗಿ ಒಂದು ಸಮಾಜವನ್ನ ಓಲೈಕೆ ಮಾಡುವ ಅವಶ್ಯಕತೆಯಿಲ್ಲ. ಮುಸ್ಲಿಂ ಬಾಂಧವರ ಬಗ್ಗೆ ನಮ್ಮ ಕಮಿಟ್‌ಮೆಂಟ್ ಏನು ಅಂತ ಎಲ್ಲರಿಗೂ ಗೊತ್ತು. ಕಳೆದ ಬಾರಿ ಉಂಟಾದ ಸಮಸ್ಯೆ ಬಗ್ಗೆ ಧ್ವನಿ ಎತ್ತಿ ಅವರ ಪರವಾಗಿ ನಿಂತಿದ್ದು ನಾನು. ಹಾಗಾಗಿ ಯಾವುದೇ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದು ಮನವಿ ಮಾಡಿದ್ದಾರೆ. ಮುಂದಿನ ಒಂದು ತಿಂಗಳ ಒಳಗೆ 31 ಜಿಲ್ಲೆಗಳಲ್ಲೂ ಸಭೆ ಮಾಡಲಿದ್ದೇವೆ. ಪಕ್ಷದ ಮುಖಂಡರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಕೆಲಸವಾಗುತ್ತೆ. ಮೈತ್ರಿಯಿಂದ ನಮ್ಮ ಅಭ್ಯರ್ಥಿಗಳಿಗೆ ಟಿಕೆಟ್ ಸಮಸ್ಯೆ ಉಂಟಾಗುವುದಿಲ್ಲ. ಈ ಬಗ್ಗೆ ನಾನು ಭರವಸೆ ಕೊಡುತ್ತೇನೆ. ಈ ಬಗ್ಗೆ ಮುಕ್ತವಾಗಿ ಮತ್ತೊಮ್ಮೆ ಚರ್ಚೆ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ. ಹೊಂದಾಣಿಕೆಯಿಂದ ಯಾರ ರಾಜಕೀಯ ಭವಿಷ್ಯವನ್ನೂ ಹೊಸಕಿಹಾಕಲ್ಲ. ಜಿ.ಟಿ ದೇವೇಗೌಡ ಅವರ ನೇತೃತ್ವದ ಕೋರ್ ಕಮಿಟಿ ಇದೆ. ಈ ಸಮಿತಿ ಮೂಲಕ ಸಂಘಟನೆ ಮಾಡ್ತೀವಿ. ಕಾಂಗ್ರೆಸ್ ನಾಯಕರು ನನ್ನ ಬಗ್ಗೆ ಏನು ಬೇಕಾದ್ರೂ ಅವಹೇಳನ ಮಾಡಲಿ. ಅದಕ್ಕೆ ನನ್ನ ಕಾರ್ತಕರ್ತರು ಹಾಗೂ ನಾಡಿನ ಜನತೆ ಮುಂದಿನ ದಿನಗಳಲ್ಲಿ ಉತ್ತರ ಕೊಡುತ್ತಾರೆ ಎಂದು ಹೇಳಿದ್ದಾರೆ.