ಮುಂಬೈ: ಮುಸ್ಲಿಮರೇ ಹಚ್ಚಿದ್ದ ಬೆಂಕಿಯಲ್ಲಿ ನಿಮ್ಮ ತಾಯಿ ಪ್ರಾಣ ಬಿಟ್ಟಿದ್ದನ್ನು ಮರೆತೀರಾ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಿರುಗೇಟು ನೀಡಿದ್ದಾರೆ. ಯೋಗಿ ಆದಿತ್ಯನಾಥ್ ಅವರನ್ನು ಭಯೋತ್ಪಾದಕರಿಗೆ ಹೋಲಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೆಲದಿನಗಳ ಹಿಂದೆ ಹೊಸ ವಿವಾದವನ್ನೇ ಸಷ್ಟಿಸಿದ್ದರು.
ಇದೀಗ ಮಲ್ಲಿಕಾರ್ಜುನ ಖರ್ಗೆಯವರ ಈ ಮಾತಿಗೆ ಯೋಗಿ ಆದಿತ್ಯನಾಥ್ ಅವರು ಮಹಾರಾಷ್ಟ್ರದ ಅಚಲಪುರದಲ್ಲಿ ನಡೆದ ಸಮಾವೇಶದಲ್ಲಿ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನೊಬ್ಬ ಯೋಗಿ, ಯೋಗಿಗೆ ದೇಶವೇ ಮೊದಲು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನಿಮಗೆ ತುಷ್ಟೀಕರಣ ನೀತಿ ಮೊದಲು. ನಾನು ಖರ್ಗೆ ಅವರಿಗೆ ಹೇಳುತ್ತಿದ್ದೇನೆ. ಒಬ್ಬ ಯೋಗಿಗೆ ದೇಶವು ಮೊದಲು ಬರುತ್ತದೆ. ನನ್ನ ನಾಯಕ ಮೋದಿಯವರಿಗೂ ದೇಶವೇ ಮೊದಲು.
ಆದರೆ ನಿಮಗೆ ಕಾಂಗ್ರೆಸ್ ತುಷ್ಟೀಕರಣವೇ ಮೊದಲು’ ಎಂದು ಯೋಗಿ ಆದಿತ್ಯನಾಥ್ ಹೇಳಿದರು. ಮಲ್ಲಿಕಾರ್ಜುನ ಖರ್ಗೆಯವರ ಗ್ರಾಮವು ಹೈದರಾಬಾದ್ ನಿಜಾಮರ ಅಧೀನದ ಗ್ರಾಮವಾಗಿತ್ತು. ಭಾರತ ಬ್ರಿಟಿಷರ ಅಧೀನದಲ್ಲಿದ್ದಾಗ ಕಾಂಗ್ರೆಸ್‌ನ ಅಂದಿನ ನಾಯಕತ್ವ ಮುಸ್ಲಿಂ ಲೀಗ್‌ನ ಸಹಯೋಗದಲ್ಲಿ ಮೌನ ವಹಿಸಿತ್ತು. ಆದ್ದರಿಂದಲೇ ಆ ಸಮಯದಲ್ಲಿ ಮುಸ್ಲಿಂ ಲೀಗ್ ಹಿಂದೂಗಳನ್ನು ಆಯ್ದು ಕೊಲ್ಲುತ್ತಿತ್ತು. ಇದೇ ಬೆಂಕಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಗ್ರಾಮವೂ ಸುಟ್ಟು ಕರಕಲಾಗಿದ್ದು, ಅವರ ತಾಯಿ ಹಾಗೂ ಕುಟುಂಬದವರು ಸಾವನ್ನಪ್ಪಿದ್ದರು. ಆದರೆ ಖರ್ಗೆಯವರು ಇದನ್ನು ಹೇಳುವುದಿಲ್ಲ ಏಕೆಂದರೆ ಅವರು ಆ ಮಾತುಗಳನ್ನು ಆಡಿದರೆ ಮುಸ್ಲಿಂ ಮತಗಳು ನುಣುಚಿಕೊಳ್ಳುತ್ತವೆ ಎಂದು ತಿಳಿದಿದೆ. ಮತ ಬ್ಯಾಂಕ್‌ಗಾಗಿ ಕುಟುಂಬದವರ ತ್ಯಾಗವನ್ನು ಖರ್ಗೆ ಮರೆತಿದ್ದಾರೆ ಎಂದರು.