ಮಂಗಳೂರು : ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಧ್ಯಕ್ಷ ಡಾ. ಮೋಹನ್ ಆಳ್ವರ ತಂದೆ ಆನಂದ ಆಳ್ವ ಇಂದು ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.
106 ವರ್ಷ ಪ್ರಾಯದ ಆನಂದ ಆಳ್ವ ಇಳಿ ವಯಸ್ಸಿನಲ್ಲೂ ಅತ್ಯಂತ ಕ್ರೀಯಾಶೀಲರಾಗಿ ಗುರುತಿಸಿಕೊಂಡಿದ್ದರು. ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆಯುವ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಮುಂಚೂಣಿಯಲ್ಲಿ ಭಾಗವಹಿಸುವ ಕೆಲವೇ ಮಂದಿಗಳಲ್ಲಿ ಆನಂದ ಆಳ್ವರೂ ಒಬ್ಬರಾಗಿದ್ದಾರೆ. ಮಕ್ಕಳಾದ ಸೀತಾರಾಮ, ಬಾಲಕೃಷ್ಣ, ಡಾ.ಮೋಹನ್ ಆಳ್ವ, ಮೀನಾಕ್ಷಿ ಸೇರಿದಂತೆ ಅಸಂಖ್ಯಾತ ಬಂಧು-ಮಿತ್ರರನ್ನು ಅಗಲಿರುವ ಆನಂದ ಆಳ್ವ ನಿಧನಕ್ಕೆ ಗಣ್ಯರು ಕಂಬನಿ ಮಿಡಿದ್ದಾರೆ.
ದೇವಸ್ಥಾನಗಳ ಜೀರ್ಣೋದ್ಧಾರ ಸೇರಿದಂತೆ ಹಲವು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಆನಂದ ಆಳ್ವ ಮೂಡಬಿದಿರೆ ಪರಿಸರದಲ್ಲಿ ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದರು. ಪ್ರಗತಿಪರ ರೈತರೂ ಆಗಿದ್ದ ಆನಂದ ಆಳ್ವ ಕಷ್ಟಗಳಿಗೆ ಯಾವಾಗಲೂ ವಿಚಲಿತರಾಗಿರಲಿಲ್ಲ 1974 ರಲ್ಲಿ ಜಾರಿಗೆ ಬಂದ ಭೂ ನ್ಯಾಯಮಂಡಳಿ ಕಾಯಿದೆಯು ಕೃಷಿ ಕೈಗಳ ತೀವ್ರ ಕೊರತೆಯನ್ನು ಉಂಟುಮಾಡಿತು. ಆ ಸಮಯದಲ್ಲಿ, ಅವರು 15 ಜೋಡಿ ಎಮ್ಮೆಗಳನ್ನು ಖರೀದಿಸಿದರು ಮತ್ತು ಅವರ ಕುಟುಂಬದ ಸದಸ್ಯರೊಂದಿಗೆ ಭತ್ತದ ಗದ್ದೆಗಳನ್ನು ಉಳುಮೆ ಮಾಡಿದ್ದರು. 1979 ರಿಂದ 1989 ರವರೆಗೆ ತಮ್ಮ ವಿಶಾಲವಾದ ಭತ್ತದ ಗದ್ದೆಯಲ್ಲಿ ಕಂಬಳವನ್ನು ಪ್ರವೇಶ ಟಿಕೆಟ್‌ಗಳೊಂದಿಗೆ ಆಯೋಜಿಸಿದ್ದ ಕೀರ್ತಿ ಕೂಡ ಆನಂದ ಆಳ್ವರಿಗೆ ಸಲ್ಲುತ್ತಿದೆ.ಅವರು ತಮ್ಮ ನೆರೆಹೊರೆಯ ಅನೇಕ ದೇವಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ವಿವಿಧ ದೇವಾಲಯಗಳ ಜೀರ್ಣೋದ್ಧಾರಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ.