ಬೆಂಗಳೂರು : ಮೈಸೂರು ಹಾಗೂ ಮಂಡ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದ ಭ್ರೂಣ ಹತ್ಯೆ ಜಾಲದ ಕುರಿತಂತೆ ಇದೀಗ ಮತ್ತಷ್ಟು ವರದಿ ಬಂದಿದ್ದು, ಜೀವ ಉಳಿಸಬೇಕಾದ ವೈದ್ಯರೇ ಈ ದಂಧೆಯಲ್ಲಿ ತೊಡಗಿಕೊಂಡಿದ್ದು, ಮೂರು ತಿಂಗಳಿಗೆ ಅಂದಾಜು 242ಕ್ಕೂ ಅಧಿಕ ಭ್ರೂಣವನ್ನು ಹತ್ಯೆ ಮಾಡಲಾಗಿದ್ದು,ಈ ದಂಧೆ ಕಳೆದ 2 ವರ್ಷಗಳಿಂದ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ. ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಮತ್ತಷ್ಟು ಆತಂಕಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಇಲ್ಲಿಯವರೆಗೂ 9 ಜನರನ್ನು ಬಂಧಿಸಿದ್ದು, ಚೆನ್ನೈ ಮೂಲದ ವೈದ್ಯ ತುಳಸಿರಾಮ್, ಮೈಸೂರಿನ ಖಾಸಗಿ ಆಸ್ಪತ್ರೆಯೊಂದರ ವೈದ್ಯ ಡಾ. ಚಂದನ್ ಬಲ್ಲಾಳ್, ಆತನ ಪತ್ನಿ ಮೀನಾ, ಮೈಸೂರಿನ ಖಾಸಗಿ ಆಸ್ಪತ್ರೆಯ ರಿಸೆಪ್ಶನಿಸ್ಟ್ ರಿಜ್ಮಾ, ಲ್ಯಾಬ್ ಟೆಕ್ನಿಶಿಯನ್ ನಿಸ್ಸಾರ್ ಎಂಬಾತನನ್ನು ಬಂಧಿಸಲಾಗಿದೆ, ಇನ್ನು, ಈ ಪ್ರಕರಣದಲ್ಲಿ ಮೊನ್ನೆಯೇ ಮೈಸೂರಿನ ಉದಯಗಿರಿಯ ಖಾಸಗಿ ಆಸ್ಪತ್ರೆ, ರಾಜ್ ಕುಮಾರ್ ರಸ್ತೆಯ ಆಯುರ್ವೇದಿಕ್ ಡೇ ಕೇರ್ ಸೆಂಟರನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಮಂಡ್ಯದ ಆಲೆಮನೆಯಲ್ಲಿ ಭ್ರೂಣಗಳ ಹತ್ಯೆ ಮಾಡಿರುವುದು ಪತ್ತೆಯಾಗಿದ್ದು, ಮೂರು ತಿಂಗಳಲ್ಲಿ 242 ಭ್ರೂಣ ಹತ್ಯೆ ಮಾಡಿದ್ದಾರೆ. ಪ್ರತಿ ಭ್ರೂಣ ಹತ್ಯೆಗೆ 25ರಿಂದ 30,000 ರೂ ಪಡೆದಿದ್ದಾರೆ. ಪತ್ತೆಗೆ 25ರಿಂದ 30,000 ರೂ. ಹಾಗೂ ಹತ್ಯೆಗೆ ಮತ್ತೆ 30,000 ರೂ. ಸೇರಿದಂತೆ ಒಟ್ಟು 60,000 ರೂ. ಪ್ಯಾಕೇಜ್ ರೀತಿಯಲ್ಲಿ ದಂಧೆ ನಡೆಸುತ್ತಿದ್ದರು. ಈ ಕುರಿತು ತನಿಖೆ ಮುಂದುವರಿಸಿದ್ದೇವೆ. ಇನ್ನೂ ಇಬ್ಬರು ಮಧ್ಯವರ್ತಿಗಳು ಸಿಗಬೇಕಿದೆ. ಅವರು ಸಿಕ್ಕಮೇಲೆ ಇತರೆ ಮಾಹಿತಿಗಳು ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ
ಮೂರು ತಿಂಗಳಲ್ಲಿ 242 ಭ್ರೂಣ ಹತ್ಯೆ ಮಾಡಲಾಗಿದ್ದು, ಆರೋಪಿಗಳೇ ಒಪ್ಪಿಕೊಂಡಂತೆ ಎರಡು ವರ್ಷಗಳಿಂದ ಭ್ರೂಣ ಹತ್ಯೆ ಮಾಡುತ್ತಿದ್ದಾರೆ. ಇದರ ಲೆಕ್ಕದಂತೆ ಒಂದು ವರ್ಷಕ್ಕೆ ಕನಿಷ್ಠ 1,000 ಭ್ರೂಣ ಹತ್ಯೆ ಮಾಡುತ್ತಿದ್ದಾರೆ. ಎರಡು ವರ್ಷಕ್ಕೆ 2,000 ಭ್ರೂಣ ಹತ್ಯೆ ಮಾಡಿರುವ ಶಂಕೆ ಇದೆ. ಪೊಲೀಸರ ತನಿಖೆಯಲ್ಲಿ ಮೂರು ವರ್ಷದಿಂದ ಕೃತ್ಯವೆಸಗಿರುವುದು ಗೊತ್ತಾಗಿದೆ. ಅಲ್ಲಿಗೆ 3,000 ದಷ್ಟು ಭ್ರೂಣ ಹತ್ಯೆ ಮಾಡಿರುವ ಸಾಧ್ಯತೆ ಇದೆ.