ನವದೆಹಲಿ: ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಹೊರ ಬಿದ್ದು ಒಂದು ವಾರ ಪೂರ್ಣಗೊಳ್ಳೋಕೆ ಬಂದರೂ ಕೂಡ ತೆಲಂಗಾಣವನ್ನು ಹೊರತುಪಡಿಸಿ ಬಿಜೆಪಿ ಗೆಲುವಿನ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಡ ರಾಜ್ಯಗಳಲ್ಲಿ ಯಾರಾಗಲಿದ್ದಾರೆ ಮುಖ್ಯಮಂತ್ರಿ? ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆದರೆ, ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿರುವ ಆಕಾಂಕ್ಷಿಗಳ ದೆಹಲಿ ಅಲೆದಾಟ ಜೋರಾಗಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಗಾದಿಯ ಮೇಲೆ ಹಾಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತೋರ್ವ ನಾಯಕ ಪ್ರಹ್ಲಾದ್ ಸಿಂಗ್ ಪಟೇಲ್ ಸೇರಿ ಮೂವರು ಮುಖಂಡರು ಕಣ್ಣಿಟ್ಟಿದ್ದರೆ, ಛತ್ತೀಸ್ ಗಡದಲ್ಲಿ ಕೇಂದ್ರ ಸಚಿವರಾದ ಗೋಮತಿ ಸಾಯ್, ಇಲ್ಲಿನ ಬಿಜೆಪಿ ರಾಜ್ಯ ಘಟಕಸಯ ಅಧ್ಯಕ್ಷ ಅರುಣ್ ಸಾವ್ ಮತ್ತು ಎಸ್ಟಿ ಸಮುದಾಯಕ್ಕೆ ಸೇರಿದ ಬಿಜೆಪಿ ನಾಯಕಿ ಲತಾ ಉಸೆಂಡಿ ಅವರ ಹೆಸರುಗಳು ಚಾಲ್ತಿಯಲ್ಲಿವೆ. ಇನ್ನು ರಾಜಸ್ಥಾನ ಮುಖ್ಯಮಂತ್ರಿ ರೇಸ್ ನಲ್ಲಿ ಮಾಜಿ ಸಿಎಂ ವಸುಂದಸರಾರಾಜೆ ಸಿಂಧೆ ಅವರನ್ನು ಹಿಂದಿಕ್ಕಿದ ಯೋಗಿ ಬಾಬಾ ಬಾಲಕನಾಥ್ ಅವರ ಹೆಸರು ಮುಂಚೂಣಿಯಲ್ಲಿದೆ. ಕಾಂಗ್ರೆಸ್ ಆಡಳಿತವಿದ್ದ ರಾಜಸ್ಥಾನ ಮತ್ತು ಛತ್ತೀಸ್ ಗಡ ರಾಜ್ಯಗಳನ್ನು ಈ ಬಾರಿ ಹೆಚ್ಚುವರಿಯಾಗಿ ಗೆದ್ದುಕೊಂಡ ಬಿಜೆಪಿಯ ಹೈಕಮಾಂಡ್ ನ ಲೆಕ್ಕಾಚಾರವೇ ಬೇರೆಯಾಗಿದ್ದು, ರಾಜಸ್ಥಾನದಲ್ಲಿ ಕಾವಿಧಾರಿ ಬಾಬಾ ಬಾಲಕನಾಥ್ ಅವರನ್ನು ಸಿಎಂ ಗದ್ದುಗೆಗೆ ಏರಿಸುವ ಇರಾದೆ ಇದೆ ಎನ್ನಲಾಗುತ್ತಿದೆ. ಇದರಿಂದ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಮಾಜಿ ಮುಖ್ಯಮಂತ್ರಿ ವಸುಂಧರಾರಾಜೆ ಸಿಂಧೆಗೆ ನಿರಾಸೆಯಾಗೋದು ಖಚಿತವಾಗಿದೆ. ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುವಲ್ಲಿ ಯಶಸ್ವಿಯಾದ ಯೋಗಿ ಆದಿತ್ಯನಾಥ್ ರಂತೆ ರಾಜಸ್ಥಾನದಲ್ಲೂ ಇದೇ ಮಾದರಿಯಲ್ಲಿ ಬಾಬಾ ಬಾಲಕನಾಥ್ ಅವರನ್ನು ಮುಖ್ಯಮಂತ್ರಿ ಪೀಠದಲ್ಲಿ ಕೂರಿಸಬೇಕೆಂದು ಬಿಜೆಪಿ ವರಿಷ್ಠರು ನಿರ್ಧರಿಸಿದಂತಿದೆ. ಇನ್ನು ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಯಾರಾಗಲಿದ್ದಾರೆ? ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಆದರೆ, ದೆಹಲಿಯ ಬಿಜೆಪಿ ಉನ್ನತ ಮೂಲಗಳ ಪ್ರಕಾರ, ಹಾಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರ ಬದಲಿಗೆ ಕೇಂದ್ರ ಕೃಷಿ ಸಚಿವರು ಮತ್ತು ಅಮಿತ್ ಶಾಗೆ ಆಪ್ತರೂ ಆಗಿರುವ ನರೇಂದ್ರಸಿಂಗ್ ತೋಮರ್ ಅವರಿಗೆ ಹೈಕಮಾಂಡ್, ಸಿಎಂ ಹುದ್ದೆಯ ಮಣೆ ಹಾಕಲಿದೆ ಎನ್ನಲಾಗುತ್ತಿದೆ. ಹೀಗಾಗಿ ಬಿಜೆಪಿ ಗೆಲುವಿನ ನಗೆ ಬೀರಿದ ಈ ಮೂರೂ ರಾಜ್ಯಗಳಲ್ಲಿ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು ಪ್ರಧಾನಿ ಸೇರಿದಂತೆ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹಸಚಿವ ಅಮಿತ್ ಶಾ ಅವರ ಮೇಲೆ ತಮ್ಮ ತಮ್ಮ ಬೆಂಬಲಿಗ ಶಾಸಕರೊಂದಿಗೆ ಪ್ರಭಾವ ಬೀರತೊಡಗಿರೋದು ಕಂಡು ಬರುತ್ತಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆ ಬಿಜೆಪಿ ಹೈಕಮಾಂಡ್ ಆಯಾ ರಾಜ್ಯಗಳ ಶಾಸಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದು, ಮೂರೂ ರಾಜ್ಯಗಳಿಗೆ ತನ್ನ ವೀಕ್ಷಕರನ್ನು ನೇಮಿಸಿ ಕಳುಹಿಸಿದೆ. ಇಷ್ಟರಲ್ಲೇ ಬಿಜೆಪಿ ಆಡಳಿತ ಹಿಡಿದ ರಾಜ್ಯಗಳಿಗೆ ಶಾಸಕಾಂಗ ನಾಯಕರ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.