ಮೈಸೂರು: ಎಚ್.ಡಿ.ಕೋಟೆ ತಾಲ್ಲೂಕಿನ ಮಾಸ್ತಿಗುಡಿ ಹಾಡಿ ಪುನರ್ವಸತಿ ಕೇಂದ್ರದ ವಸಂತ (36) ಎಂಬ ವ್ಯಕ್ತಿ ಆನೆ ತುಳಿತಕ್ಕೆ ಬಲಿಯಾದ ದುರ್ಘಟನೆ ನಡೆದಿದೆ. ಮಾಸ್ತಿಗುಡಿ ಹಾಡಿಯ ವಸಂತ ಎಂಬ ಆದಿವಾಸಿ ವ್ಯಕ್ತಿ ಹಾಡಿಯ ಪಕ್ಕದಲ್ಲಿ ಇರುವ ಜಮೀನಿನಲ್ಲಿ ರಾತ್ರಿ ಕಾವಲು ಕಾಯಲು ಹೋಗಿದ್ದಾಗ ರಾತ್ರಿ ಸುಮಾರು 2 ಗಂಟೆ ಸಮಯದಲ್ಲಿ ಹಠಾತ್ ಆನೆ ದಾಳಿ ನಡೆಸಿದೆ. ಆನೆ ವಸಂತನನ್ನು ಮನಸೋಇಚ್ಛೆ ಎಳೆದಾಡಿ ಕಾಲಿನಿಂದ ತುಳಿದು ದಾಳಿ ಮಾಡಿದ ಪರಿಣಾಮ ವಸಂತ ಸ್ಥಳದಲ್ಲಿಯೇ ಅಸುನೀಗಿದ್ದಾನೆ. ದಾಳಿ ನಡೆದ ಸುಮಾರು ಸಮಯದ ನಂತರ ಅಕ್ಕಪಕ್ಕ ಜಮೀನಿನ ಕಾವಲುಗಾರರ ಕಣ್ಣಿಗೆ ಬಿದ್ದು ಹಾಡಿಯ ಜನರಿಗೆ ವಿಷಯ ತಿಳಿದಿದೆ. ಮೃತ ವಸಂತನಿಗೆ ಮೂರು ಚಿಕ್ಕಮಕ್ಕಳಿದ್ದು ಬದುಕಿಗೆ ಆಸರೆಯಾಗಿದ್ದ ತಂದೆಯನ್ನು ಕಳೆದುಕೊಂಡು ತಬ್ಬಲಿಯಾಗಿವೆ. ತನ್ನ ಜಮೀನಿನಲ್ಲೇ ಶವವಾಗಿ ಬಿದ್ದಿರುವ ವಸಂತನ ಮೃತದೇಹದ ಮುಂದೆ ಆತನ ಮಕ್ಕಳು ಹೆಂಡತಿ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟುವಂತಿದೆ. ಇಂತಹ ಘಟನೆ ನಡೆಯಲಿಕ್ಕೆ ಕಾರಣ ಅರಣ್ಯ ಇಲಾಖೆಯ ವೈಫಲ್ಯವೇ ಎಂದು ಹಾಡಿಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.