ಚಿತ್ರದುರ್ಗ : ಮುಂದಿನ ತಿಂಗಳು ಹತ್ತರಂದು ನಡೆಯುವ ಮೈಸೂರು ಹುಲಿ ಟಿಪ್ಪುಸುಲ್ತಾನ್ರವರ 275 ನೇ ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವ ಸಂಬಂಧ ಪ್ರವಾಸಿ ಮಂದಿರದಲ್ಲಿ ಭಾನುವಾರ ಪೂರ್ವಭಾವಿ ಸಭೆ ನಡೆಯಿತು.
ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಪ್ರತಿ ವರ್ಷದಂತೆ ಈ ವರ್ಷವೂ ಟಿಪ್ಪುಜಯಂತಿ ಹಾಗೂ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಎಲ್ಲಾ ಜಾತಿ ಧರ್ಮದವರು ಹಾಗೂ ಮಠಾಧೀಶರುಗಳನ್ನು ಆಹ್ವಾನಿಸೋಣ. ಏಕೆಂದರೆ ಟಿಪ್ಪು ಕೇವಲ ಒಂದು ಜಾತಿ ಧರ್ಮಕ್ಕೆ ಸೀಮಿತವಲ್ಲ. ವಿಶ್ವಾದ್ಯಂತ ಟಿಪ್ಪು ಇತಿಹಾಸವಿದೆ ಎಂದರು.
ಪಠ್ಯ ಪುಸ್ತಕದಲ್ಲಿ ಟಿಪ್ಪು ಇತಿಹಾಸ ಸೇರ್ಪಡೆ, ಟಿಪ್ಪು ಪ್ರಾಧಿಕಾರ ರಚನೆ ಹಾಗೂ ಸಂಶೋದನಾ ಕೇಂದ್ರ, ಯಾವುದಾದರೂ ಒಂದು ವಿಶ್ವವಿದ್ಯಾಲಯಕ್ಕೆ ಟಿಪ್ಪು ಹೆಸರಿಡುವಂತೆ ಅನೇಕ ವರ್ಷಗಳಿಂದಲೂ ಸರ್ಕಾರಕ್ಕೆ ಒತ್ತಾಯಿಸುತ್ತ ಬರುತ್ತಿದ್ದೇನೆಂದು ತಿಳಿಸಿದರು.
ಮೆರವಣಿಗೆ ನಡೆಸುವುದಕ್ಕೆ ಮೊದಲು ಜಿಲ್ಲಾಡಳಿತದ ಅನುಮತಿ ಕೇಳೋಣ, ಕೊಟ್ಟರೆ ಮೆರವಣಿಗೆ ಇಲ್ಲದಿದ್ದರೆ ನೇರವಾಗಿ ರಂಗಮಂದಿರಕ್ಕೆ ಎಲ್ಲರೂ ತೆರಳಿ ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವ ಆಚರಿಸಿ, ಬುದ್ದಿ ಜೀವಿಗಳಿಂದ ಟಿಪ್ಪು ಇತಿಹಾಸವನ್ನು ಪರಿಚಯಿಸುವ ಕೆಲಸ ಮಾಡೋಣ. ಇದಕ್ಕೆ ಎಲ್ಲರ ಸಹಕಾರ ಮುಖ್ಯ ಎಂದು ಕೋರಿದರು.
ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್ವುಲ್ಲಾ ಮಾತನಾಡಿ ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಅತ್ಯಂತ ಪ್ರಬಲವಾದವು. ಮೆರವಣಿಗೆ ಮಾಡುವುದಾದರೆ ಎಲ್ಲಿಯೂ ಶಾಂತಿಗೆ ಭಂಗವಾಗಬಾರದು. ಕಾನೂನನ್ನು ಗೌರವಿಸಬೇಕಿದೆ. ಪರಿಸ್ಥಿತಿ ಸೂಕ್ಷ್ಮವಾಗಿರುವುದರಿಂದ ಹೊಳಲ್ಕೆರೆ ರಸ್ತೆಯ ಕನಕವೃತ್ತದಿಂದ ಮೆರವಣಿಗೆ ಮಾಡುವ ಬದಲು ಪ್ರವಾಸಿ ಮಂದಿರದಿಂದ ಮುಖಂಡರುಗಳೆಲ್ಲಾ ಸೇರಿ ತ.ರಾ.ಸು.ರಂಗಮಂದಿರಕ್ಕೆ ಮೆರವಣಿಗೆ ಮೂಲಕ ಹೊರಟು ವೇದಿಕೆ ಕಾರ್ಯಕ್ರಮ ಆಚರಿಸೋಣ ಎಂದು ಸಲಹೆ ನೀಡಿದರು.
ದೇಶಕ್ಕಾಗಿ ತನ್ನ ಮಕ್ಕಳನ್ನು ಒತ್ತೆಯಿಟ್ಟು ಬ್ರಿಟೀಷರ ವಿರುದ್ದ ಹೋರಾಡಿದ ಟಿಪ್ಪು ಹೆಸರಿಗೆ ಪವಿತ್ರತೆಯಿದೆ. ಅದಕ್ಕೆ ಕಳಂಕ ಬರದಂತೆ ಟಿಪ್ಪು ಜಯಂತಿಯನ್ನು ಆಚರಿಸೋಣ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್ ಮಾತನಾಡಿ ಟಿಪ್ಪುಸುಲ್ತಾನ್ರವರನ್ನು ಕೇವಲ ಮುಸ್ಲಿಂ ಜನಾಂಗಕ್ಕೆ ಮಾತ್ರ ಸೀಮಿತಗೊಳಿಸಬಾರದು. ಮೈಸೂರು ಮಹಾರಾಜರ ಕಾಲದಲ್ಲಿ ಆಡಳಿತ ನಡೆಸಿದ ಟಿಪ್ಪು ರಾಜ್ಯವನ್ನು ವಿಸ್ತರಿಸಿ ಉತ್ತಮ ಆಡಳಿತ ಕೊಟ್ಟಿದ್ದಾರೆ. ಅನೇಕ ಹಿಂದೂ ದೇವಾಲಯಗಳ ಜೀರ್ಣೋದ್ದಾರ ಕೂಡ ಇವರ ಕಾಲದಲ್ಲಿ ಆಗಿದೆ. ಶೃಂಗೇರಿ ಶಾರದಾಂಭೆಯ ಪರಮ ಭಕ್ತರಾಗಿದ್ದರೂ ಎಂದು ಸ್ಮರಿಸಿದರು.
ಜಯಂತಿಯಲ್ಲಿ ಕುಣಿದು ಕುಪ್ಪಳಿಸುವ ಬದಲು ಟಿಪ್ಪು ವಿಚಾರ ತಿಳಿಸುವವರಿಗೆ ವೇದಿಕೆಯಲ್ಲಿ ಹೆಚ್ಚಿನ ಸಮಯ ನೀಡೋಣ. ಮೆರವಣಿಗೆಗೆ ಬದಲಾಗಿ ಪಾದಯಾತ್ರೆ ನಡೆಸಿ ನಗರದಲ್ಲಿರುವ ಎಲ್ಲಾ ಪ್ರತಿಮೆಗಳಿಗೂ ಹಾರ ಸೌಹಾರ್ಧತೆ ಮೆರೆಯುವುದು ಒಳ್ಳೆಯದು ಎಂದು ಹೇಳಿದರು.
ಗ್ಯಾರೆಂಟಿ ಅನುಷ್ಟಾನಗಳ ಸಮಿತಿ ಅಧ್ಯಕ್ಷ ಶಿವಣ್ಣ ಮಾತನಾಡಿ ಟಿಪ್ಪುಸುಲ್ತಾನ್ ಕನ್ನಡ ವಿರೋಧಿ ಎಂದು ಕೆಲವರು ಅಪ ಪ್ರಚಾರ ಮಾಡುತ್ತಿದ್ದಾರೆ. ಹಾಗಾಗಿ ಅತಿ ಜಾಗರೂಕತೆಯಿಂದ ಟಿಪ್ಪು ಜಯಂತಿಯನ್ನು ಆಚರಿಸಬೇಕಿದೆ. ಒಂದು ವೇಳೆ ಮೆರವಣಿಗೆ ಮಾಡಿದ್ದೇ ಆದರೆ ಏನಾದರೂ ಚಿಕ್ಕಪುಟ್ಟ ಅನಾಹುತಗಳು ಸಂಭವಿಸಿದರೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಮೇಲೆ ಕೋಮುವಾದಿ ಬಿಜೆಪಿ.ಯವರು ಅಪವಾದ ಹಾಕುತ್ತಾರೆ ಎಂದು ಹೇಳಿದರು.
ಎಸ್.ಡಿ.ಪಿ.ಐ. ಜಿಲ್ಲಾ ಉಪಾಧ್ಯಕ್ಷ ಪಿ.ಸುಬಾನುಲ್ಲಾ ಮಾತನಾಡಿ ಟಿಪ್ಪುಸುಲ್ತಾನ್ ವಿಚಾರಗಳನ್ನು ಇಂದಿನ ಯುವ ಪೀಳಿಗೆಗೆ ತಿಳಿಸಿ ಸನ್ಮಾರ್ಗದಲ್ಲಿ ಕೊಂಡೊಯ್ಯುವ ಜವಾಬ್ದಾರಿ ಹಿರಿಯರ ಮೇಲಿದೆ. ಮೆರವಣಿಗೆಯೆಂದರೆ ಕುಣಿದು ಕುಪ್ಪಳಿಸುವುದಲ್ಲ. ಟಿಪ್ಪು ಆದರ್ಶಗಳಿಗೆ ಗೌರವ ಬರುವ ರೀತಿಯಲ್ಲಿ ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವ ಆಚರಿಸೋಣ ಎಂದರು.
ಎ.ಜಾಕೀರ್ ಹುಸೇನ್ ಮಾತನಾಡುತ್ತ ಟಿಪ್ಪು ಜಯಂತಿಯೆಂದರೆ ಕಡ್ಡಾಯವಾಗಿ ಮೆರವಣಿಗೆಯಾಗಲೇಬೇಕು. ಆಗಲೆ ಎಲ್ಲರಿಗೂ ಗೊತ್ತಾಗುವುದು ಟಿಪ್ಪು ಜಯಂತಿ ಆಚರಿಸುತ್ತಿದ್ದಾರೆಂದು. ಅದಕ್ಕಾಗಿ ಟಿಪ್ಪುಜಯಂತಿ ಮತ್ತು ಕನ್ನಡ ರಾಜ್ಯೋತ್ಸವವನ್ನು ಎಲ್ಲರೂ ಸೇರಿ ಆಚರಿಸೋಣ ಎಂದು ಸಲಹೆ ನೀಡಿದರು.
ನಗರಸಭೆ ಮಾಜಿ ಅಧ್ಯಕ್ಷ ಮಹಮದ್ ಅಹಮದ್ ಪಾಷ, ಹೆಚ್.ಆರ್.ಮಹಮದಿ, ಜಮೀರ್, ಹನೀಸ್, ದಲಿತ ಮುಖಂಡ ಬಿ.ರಾಜಣ್ಣ, ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಮೀವುಲ್ಲಾ, ವೀರಶೈವ ಲಿಂಗಾಯತ ಯುವ ವೇದಿಕೆ ಅಧ್ಯಕ್ಷ ಮಂಜುನಾಥ್, ನಿವೃತ್ತ ಡಿ.ವೈ.ಎಸ್ಪಿ. ಅಬ್ದುಲ್ ರೆಹಮಾನ್, ನ್ಯಾಯವಾದಿ ಮಾಲತೇಶ್ ಅರಸ್, ಮುದಸಿರ್ ನವಾಜ್, ಫೈಲ್ವಾನ್ ಆಫೀಸ್, ಫೈಲ್ವಾನ್ ಸದ್ದಾಂ ಇನ್ನು ಅನೇಕರು ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಿದರು.