ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್ ಹಾಗೂ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಶುಭ ಸುದ್ದಿ ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ ಕುಟುಂಬಕ್ಕೆ ಹೊಸ ಅತಿಥಿಯನ್ನು ಸ್ವಾಗತಿಸಲಾಗುವುದು ಎಂದು ಘೋಷಿಸಿದ್ದಾರೆ. ಶುಕ್ರವಾರ ಸಂಜೆಯಷ್ಟೇ ಅಥಿಯಾ ಮತ್ತು ರಾಹುಲ್ ಅವರು ಇನ್ ಸ್ಟಾಗ್ರಾಂ ಪೋಸ್ಟ್ ನಲ್ಲಿ ಕಣ್ಣನ್ನು ಹೋಲುವ ಚಿತ್ರದ ಕೆಳಗಡೆ `our beautiful blessing is coming soon 2025’ ಎಂಬ ಒಕ್ಕಣೆಯೊಂದಿಗೆ ಎರಡು ಪುಟ್ಟ ಪಾದಗಳ ಚಿತ್ರವನ್ನು ಹಾಕುವ ಮೂಲಕ ಹೊಸ ಮಗುವಿನ ಜನನದ ಶುಭ ಸುದ್ದಿಯನ್ನು ತಿಳಿಸಿದ್ದಾರೆ. 2025ರಲ್ಲಿ ಹುಟ್ಟುವ ಮಗುವಿನ ಮೇಲೆ ದೇವರ ಆಶೀರ್ವಾದ ಇರಲಿ ಎಂದು ಕೆಎಲ್ ರಾಹುಲ್-ಅಥಿಯಾ ಈ ಪೋಸ್ಟ್ನಲ್ಲಿ ಹೇಳಿದ್ದಾರೆ. ಇದೀಗ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಎಲ್ ರಾಹುಲ್-ಅಥಿಯಾ ಶೆಟ್ಟಿ ದಂಪತಿಗೆ ಹಲವು ಕ್ರಿಕೆಟಿಗರು, ಸಿನಿ ಗಣ್ಯರು, ಅಭಿಮಾನಿಗಳು ಮತ್ತು ನೆಟಿಜನ್ಗಳು ಶುಭಾಶಯಗಳನ್ನು ಕೋರುತ್ತಿದ್ದಾರೆ. ಇದೀಗ ಕೆಎಲ್ ರಾಹುಲ್ ಅವರು ಬಾರ್ಡರ್ – ಗವಾಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಸಲುವಾಗಿ ಆಸ್ಟ್ರೇಲಿಯಾದಲ್ಲಿದ್ದಾರೆ. ಭಾರತ ಇಲ್ಲಿ 5 ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಮೊದಲ ಪಂದ್ಯ ನವೆಂಬರ್ 22ರಂದು ಆಡಿಲೇಡ್ ನಲ್ಲಿ ಶುರುವಾಗಲಿದೆ. ಅದಕ್ಕೂ ಮೊದಲೇ ಇದೀಗ ಭಾರತ ಎ ಮತ್ತು ಆಸ್ಚ್ರೇಲಿಯಾ ಎ ತಂಡಗಳ ನಡುವೆ ನಡೆಯುತ್ತಿರುವ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರು ಆಡುತ್ತಿದ್ದಾರೆ.
