ಮೊರಾಕ್ಕೊ: ಉತ್ತರ ಆಫ್ರಿಕಾ ಖಂಡದ ಮೊರಾಕ್ಕೊ ದೇಶದಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ 6.8 ತೀವ್ರತೆಯಲ್ಲಿ ಭೂಕಂಪದಲ್ಲಿ 2 ಸಾವಿರ ಜನರ ಸಾವಿಗೀಡಾಗಿದ್ದು, 750ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, 205 ಜನರ ಸ್ಥಿತಿ ಗಂಭೀರವಾಗಿದೆ.
ಅವಶೇಷಗಳಡಿ ನೂರಾರು ಜನರು ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆಗೆ ಹಲವು ಅಡ್ಡಿಗಳು ಎದುರಾಗಿವೆ. ಹೀಗಾಗಿ ಮೊರಾಕ್ಕೊದಲ್ಲಿ ಮೂರು ದಿನ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ.
ಭೂಕಂಪದಿಂದಾಗಿ ಅಟ್ಲಾಸ್ ಪರ್ವತ ಶ್ರೇಣಿಯಿಂದ ಐತಿಹಾಸಿಕ ನಗರಿ ಮ್ಯಾರಕೇಶ್‌ವರೆಗೆ ಇರುವ ನಗರ, ಹಳ್ಳಿಗಳ ಹಲವಾರು ಕಟ್ಟಡಗಳು ಸಂಪೂರ್ಣ ಅಥವಾ ಭಾಗಶಃ ಕುಸಿದಿವೆ. ವಿದ್ಯುತ್ ಹಾಗೂ ರಸ್ತೆ ಸಂಪರ್ಕ ಹಲವು ಪ್ರದೇಶಗಳಲ್ಲಿ ಕಡಿತಗೊಂಡಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಆ್ಯಂಬುಲೆನ್ಸ್ ಸಂಚರಿಸುವುದಕ್ಕೂ ಆಗದಷ್ಟು ರಸ್ತೆಗಳ ಮೇಲೆ ಬಂಡೆಗಳು ಕುಸಿದಿದ್ದು, ರಕ್ಷಣಾ ತಂಡಗಳು ರಸ್ತೆ ಸರಿಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
45 ಲಕ್ಷ ಜನರು ನೆಲೆಸಿರುವ ಮೊರಾಕ್ಕೊದ ವಾಣಿಜ್ಯ ನಗರ ಮ್ಯಾರಕೇಶ್ ನಿಂದ ದಕ್ಷಿಣ ದಿಕ್ಕಿಗೆ 70 ಕಿ.ಮೀ. ದೂರದಲ್ಲಿರುವ ಅಲ್ ಸೌತ್ ಪ್ರಾಂತ್ಯದಲ್ಲಿ ಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ. ಭೂಮಿಯ ಮೇಲಿನಿಂದ 18 ಕಿ.ಮೀ. ಆಳದಲ್ಲಿ ಈ ಕಂಪನ ಸಂಭವಿಸಿದೆ ಎಂದು ಅಮೆರಿಕದ ಭೂಗರ್ಭ ಸರ್ವೇಕ್ಷಣಾಲಯ ತಿಳಿಸಿದೆ.