ನವದೆಹಲಿ: ರಾಜಸ್ಥಾನದ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಅಪಶಕುನ ಎಂದು ಕರೆದಿದ್ದರು. ಈ ಬಗ್ಗೆ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು.
ಇದರ ಅನ್ವಯ ಕೇಂದ್ರ ಚುನಾವಣಾ ಆಯೋಗವು ಬಿಜೆಪಿ ನೀಡಿರುವ ದೂರಿಗೆ ಉತ್ತರ ನೀಡುವಂತೆ ರಾಹುಲ್ ಗಾಂಧಿಗೆ ಗುರುವಾರ ನೋಟಿಸ್ ನೀಡಿದೆ. ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ್ದಲ್ಲದೆ, ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ ಎಂದು ಬಿಜೆಪಿ, ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದೆ.
ಬಿಜೆಪಿ ದೂರು ನೀಡಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಗೆ ನೋಟಿಸ್ ಹೊರಡಿಸಿರುವ ಆಯೋಗ, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ನಿಮ್ಮ ವಿರುದ್ಧ ಕ್ರಮ ಯಾಕೆ ಜರುಗಿಸಬಾರದು ಎಂಬುದಕ್ಕೆ ಶುಕ್ರವಾರ (ನ.24) ಸಂಜೆ 6 ಗಂಟೆಯೊಳಗೆ ಉತ್ತರ ನೀಡುವಂತೆ ತಾಕೀತು ಮಾಡಿದೆ.