ನವದೆಹಲಿ: ಲೋಕಸಭೆ ಚುನಾವಣೆಯ ಮತದಾನ ಮುಕ್ತಾಯಕ್ಕೆ ಇನ್ನೂ ಒಂದು ಹಂತ ಬಾಕಿ ಇದೆ. ಈ ಮಧ್ಯೆಯೇ ಅನೇಕ ಸಮೀಕ್ಷೆಗಳು ಹೊರಬಿದ್ದಿದ್ದು, ಬಿಜೆಪಿಗೆ ಮಹುಮತ ಖಚಿತ ಎನ್ನುವುದನ್ನು ಹೇಳಿವೆ.
ಏಳನೇ ಅಥವಾ ಕೊನೆಯ ಹಂತದ ಮತದಾನವು ಜೂನ್ 1ರಂದು ನಡೆಯಲಿದೆ. ಇದಕ್ಕಾಗಿ ಚುನಾವಣೆ ಆಯೋಗ ಸಕಲ ಸಿದ್ಧತೆ ಕೈಗೊಳ್ಳುತ್ತಿದೆ. ಇದರ ಮಧ್ಯೆಯೇ, ಫಲೋಡಿ ಸಟ್ಟಾ ಬಜಾರ್ ಮಾರ್ಕೆಟ್ ಸಂಸ್ಥೆಯು ಲೋಕಸಭೆ ಚುನಾವಣೆ ಫಲಿತಾಂಶದ ಕುರಿತು ಲೇಟೆಸ್ಟ್ ಸಮೀಕ್ಷಾ ವರದಿ ಪ್ರಕಟಿಸಿದೆ. ನೂತನ ಸಮೀಕ್ಷಾ ವರದಿ ಪ್ರಕಾರ, ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ 325-330 ಸೀಟುಗಳು ಲಭಿಸುವುದು ನಿಶ್ಚಿತವಾಗಿದೆ.
ಅದರಲ್ಲೂ ಬಿಜೆಪಿಯೊಂದೇ 304-306 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷವು 60-62 ಕ್ಷೇತ್ರಗಳಲ್ಲಿ ಜಯಿಸಲಿದೆ ಎಂಬುದಾಗಿ ಸಮೀಕ್ಷಾ ವರದಿ ತಿಳಿಸಿದೆ. ಯಾವ ರಾಜ್ಯದಲ್ಲಿ ಬಿಜೆಪಿಗೆ ಎಷ್ಟು ಕ್ಷೇತ್ರ? ಉತ್ತರ ಪ್ರದೇಶದಲ್ಲಿ ಬಿಜೆಪಿಗೆ 63-65 ಕ್ಷೇತ್ರಗಳು ಲಭಿಸಲಿವೆ ಎಂಬುದಾಗಿ ಸಮೀಕ್ಷೆ ತಿಳಿಸಿದೆ. ಇನ್ನು ಗುಜರಾತ್ 25, ಮಧ್ಯಪ್ರದೇಶ 28-29, ದೆಹಲಿ 5-6, ಪಂಜಾಬ್ 2-3, ಹಿಮಾಚಲ ಪ್ರದೇಶ 4, ಛತ್ತೀಸ್‌ಗಢ 10-11, ಉತ್ತರಾಖಂಡ 5, ಬಿಹಾರ 28-29, ತೆಲಂಗಾಣ 8-9, ಜಾರ್ಖಂಡ್ 10-11 ಸೀಟುಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿದುಬಂದಿದೆ. ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಬಿಜೆಪಿಗೆ ಕಳೆದ ಬಾರಿಗಿಂತ ಹೆಚ್ಚಿನ ಕ್ಷೇತ್ರಗಳು ಬರಲಿವೆ. ಬಿಹಾರ, ಹರಿಯಾಣ, ಮಹಾರಾಷ್ಟ್ರ ಹಾಗೂ ರಾಜಸ್ಥಾನದಲ್ಲಿ ಬಿಜೆಪಿಯ ಸ್ಥಾನಗಳು ಕಡಿಮೆಯಾಗಲಿವೆ ಎಂದು ವರದಿ ತಿಳಿಸಿದೆ. ಫಲೋಡಿ ಸಟ್ಟಾ ಮಾರುಕಟ್ಟೆಯು ಶತಮಾನಗಳ ಇತಿಹಾಸ ಹೊಂದಿದೆ.
19ನೇ ಶತಮಾನದ ಅಂತ್ಯದ ವೇಳೆಗೆ ಈ ಮಾರುಕಟ್ಟೆಯ ಭವಿಷ್ಯವಾಣಿ ಮೂಲಕ ದೇಶದ ಗಮನವನ್ನೇ ಸೆಳೆದಿತ್ತು. ಹಿಂದೆ ಮಳೆಯ ಮುನ್ಸೂಚನೆಗಾಗಿ ಈ ಮಾರುಕಟ್ಟೆಯ ಮೇಲೆ ಜನ ಅವಲಂಭಿಸಿದ್ದರು. ಬರು ಬರುತ್ತಾ ಈ ಕಲೆ ದಂಧೆಯಾಗಿ ಮಾರ್ಪಾಡಾಗಿತ್ತು. ಅನಂತರದ ದಿನಗಳಲ್ಲಿ ಚುನಾವಣಾ ಭವಿಷ್ಯವಾಣಿ, ಬೆಟ್ಟಿಂಗ್ ದಂಧೆಗಳಿಗೆ ಈ ಮಾರುಕಟ್ಟೆ ಕುಖ್ಯಾತಿ ಪಡೆಯಿತು. ಕಾನೂನೂ ಬಾಹಿರವಾಗಿದ್ದರೂ ಕ್ರಿಕೆಟ್, ಐಪಿಎಲ್ ಸಂದರ್ಭದಲ್ಲಿ ಇಲ್ಲಿ ಅತಿ ಹೆಚ್ಚಾಗಿ ಬೆಟ್ಟಿಂಗ್ ನಡೆಯುತ್ತದೆ ಎಂಬ ಆರೋಪ ಕೇಳಿಬರುತ್ತದೆ.