‘ಮೋದಿಜೀ ಹವಾದಿಂದ ಎನ್‍ಡಿಎಗೆ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಗೆಲುವು’ – ಸಿ.ಟಿ.ರವಿ ವಿಶ್ವಾಸ

ಬೆಂಗಳೂರು: ರಾಜ್ಯದ ಜನತೆ ಈ ಬಾರಿ ಎಲ್ಲ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಿಸಿಕೊಡುವ ವಿಶ್ವಾಸವಿದೆ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸಿ.ಟಿ.ರವಿ ಅವರು ತಿಳಿಸಿದರು.

ನಗರದ ಬೆಂಗಳೂರಿನ ಹೋಟೆಲ್ ರಮಾಡದಲ್ಲಿ ಇಂದು ನಡೆದ ಬಿಜೆಪಿ ಲೋಕಸಭಾ ಚುನಾವಣಾ ಯೋಜನಾ ಬೈಠಕ್ ಬಳಿಕ ಅವರು ಮಾಹಿತಿ ನೀಡಿದರು. ಪಕ್ಷದ ವರಿಷ್ಠರ ಜೊತೆ ಇಂದು ಯೋಜನಾ ಬೈಠಕ್ ನಡೆದಿದೆ. ರಾಜ್ಯದ 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವುದಕ್ಕೆ ಸಂಬಂಧಿಸಿ ಕೈಗೊಳ್ಳಬೇಕಾದ ರೂಪುರೇಷೆಗಳು, ಯಾವ ವಿಚಾರವನ್ನು ಕೈಗೆತ್ತಿಕೊಳ್ಳಬೇಕು, ಸಮನ್ವಯ ಹೇಗಿರಬೇಕು ಎಂಬ ಕುರಿತು ಚರ್ಚೆ- ಚಿಂತನೆ ನಡೆಸಲಾಗಿದೆ ಎಂದರು.

ರಾಜ್ಯ ಮತ್ತು ದೇಶದ ಜನರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರ ಗ್ಯಾರಂಟಿ ಬಗ್ಗೆ ವಿಶ್ವಾಸ ಇದೆ. ರಾಜ್ಯ ಮತ್ತು ದೇಶಕ್ಕೆ ಮೋದಿಜೀಯೇ ಒಂದು ಭರವಸೆ. ರಾಜ್ಯದ ಜನತೆ ಈ ಬಾರಿ ಎಲ್ಲ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಿಸಿಕೊಡುವ ವಿಶ್ವಾಸವಿದೆ. ಇದಕ್ಕೆ ಸಂಬಂಧಿಸಿ 100 ದಿನಗಳ ರೋಡ್ ಮ್ಯಾಪನ್ನು ಸಿದ್ಧಪಡಿಸಲಾಗಿದೆ ಎಂದು ವಿವರ ನೀಡಿದರು. 100 ದಿನಗಳ ರೋಡ್ ಮ್ಯಾಪಿಗೆ ಅನುಗುಣವಾಗಿ ಪಕ್ಷದೊಳಗೆ ಮತ್ತು ಸಾರ್ವಜನಿಕ ವಲಯದಲ್ಲಿ ನಿರಂತರವಾದ ಕಾರ್ಯಚಟುವಟಿಕೆ, ಸಭೆಗಳನ್ನು ನಡೆಸುತ್ತೇವೆ ಎಂದರು.

Advertisement

ವೈಚಾರಿಕ ಹಿನ್ನೆಲೆಯ ಮತದಾರರು, ವಿವಿಧ ಯೋಜನೆಗಳ ಫಲಾನುಭವಿಗಳನ್ನು ಒಳಗೊಂಡಂತೆ ಸರ್ವೋದಯದಿಂದ ಅಂತ್ಯೋದಯದ ವರೆಗೆ ಎಂಬ ಚಿಂತನೆಯಡಿ ಕಾರ್ಯ ನಿರ್ವಹಿಸುತ್ತೇವೆ. ಸರ್ವೋದಯ ಎಂದರೆ ಸರ್ವರ ಅಭ್ಯುದಯ, ಅಂತ್ಯೋದಯ ಎಂದರೆ ಕಟ್ಟ ಕಡೆಯ ಮನುಷ್ಯನಿಗೆ ಮೊದಲ ನೆರವು ಎಂದು ತಿಳಿಸಿದರು. ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್ ಅಡಿ ಯೋಜನೆ ರೂಪಿಸಲಿದ್ದೇವೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ಹವಾ ಇರಲಿದೆ. ಕಾಂಗ್ರೆಸ್ಸಿಗೂ ಅದು ಅನುಭವಕ್ಕೆ ಬರಲು ಆರಂಭವಾಗಿದೆ. ಕೆಲವು ತಿಂಗಳ ಹಿಂದೆ ನಾನೂ ಎಂ.ಪಿ. ಕ್ಯಾಂಡಿಡೇಟ್ ಎನ್ನುತ್ತಿದ್ದ ಕಾಂಗ್ರೆಸ್ಸಿನ ಸಚಿವರು, ಈಗ ನನಗೆ ಬೇಡ, ನನಗೆ ಬೇಡ ಎನ್ನಲಾರಂಭಿಸಿದ್ದಾರೆ. 5 ರಾಜ್ಯಗಳ ಚುನಾವಣೆ ಫಲಿತಾಂಶ ಬಂದ ಬಳಿಕ ಅವರಿಗೂ ಇನ್ನೇನಿದ್ದರೂ ಮೋದಿಜೀ ಹವಾ ಎಂದು ಅರಿವಾಗಿದೆ. ನಾವು ಇರೋದನ್ನು ಉಳಿಸಿಕೊಂಡರೆ ಸಾಕೆಂಬ ಚಿಂತೆಯಲ್ಲಿ ಅವರಿದ್ದಾರೆ. ನಾವು ಪೂರ್ಣ ವಿಶ್ವಾಸದಿಂದ ಚುನಾವಣೆ ಎದುರಿಸುತ್ತೇವೆ. 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ನೇತೃತ್ವದಲ್ಲಿ ಎನ್‍ಡಿಎ ಗೆಲ್ಲಲಿದೆ. ದೇಶದಲ್ಲಿ 400ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲುವ ಸಂಕಲ್ಪ ನಮ್ಮದು ಎಂದು ತಿಳಿಸಿದರು.

ಯಾವ್ಯಾವ ಪಕ್ಷಕ್ಕೆ ಎಷ್ಟೆಷ್ಟು ಸ್ಥಾನ ಎಂಬುದನ್ನು ಎನ್‍ಡಿಎ ಸಮಿತಿ ನಿರ್ಧರಿಸಲಿದೆ. ನಾವು ಎಲ್ಲ ಕ್ಷೇತ್ರಗಳಲ್ಲಿ ಗೆಲ್ಲುವ ಸಂಬಂಧ ರಾಜ್ಯ, ಲೋಕಸಭಾ ಕ್ಷೇತ್ರ, ವಿಧಾನಸಭಾ ಕ್ಷೇತ್ರ ಮತ್ತು ಬೂತ್ ಮಟ್ಟದಲ್ಲಿ ಚಟುವಟಿಕೆ ನಡೆಸಲಿದ್ದೇವೆ. ಪ್ರತಿ ಬೂತ್‍ನಲ್ಲಿ ಶೇ 51ಕ್ಕಿಂತ ಹೆಚ್ಚು ಮತ ಗಳಿಕೆ ಕಡೆಗೆ ತಂತ್ರಗಾರಿಕೆ ರೂಪಿಸಲಿದ್ದೇವೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.

ಕರ್ನಾಟಕದಲ್ಲಿ ಎನ್‍ಡಿಎ ಭಾಗವಾಗಿ ಜೆಡಿಎಸ್ ಸೇರಿಕೊಂಡಿದೆ. ಉಳಿದ ಪಕ್ಷಗಳು ಸಹಕಾರಿಗಳಾಗಿ ಇರಲಿವೆ. ಯಾರಿಗೆ ಎಷ್ಟು ಸ್ಥಾನ ಎಂಬುದು ಎನ್‍ಡಿಎ ರಾಷ್ಟ್ರೀಯ ಮಟ್ಟದಲ್ಲಿ ತೀರ್ಮಾನ ಮಾಡಲಿದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಲೋಕಸಭಾ ಕ್ಷೇತ್ರ, ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಚರ್ಚೆ ಮತ್ತು ಸಮನ್ವಯ ಸಭೆ ನಡೆಯಲಿದೆ ಎಂದರು.

ಪ್ರತಿಯೊಬ್ಬ ಕಾರ್ಯಕರ್ತನಿಗೂ ಕೆಲಸ ಇದೆ. ಪ್ರತಿ ಕಾರ್ಯಕರ್ತನನ್ನು ಚುನಾವಣಾ ಕೆಲಸದಲ್ಲಿ ಜೋಡಿಸಿಕೊಳ್ಳುತ್ತೇವೆ ಎಂದು ಹೇಳಿದರು. ವ್ಯಕ್ತಿಗತ ನೆಲೆಯಲ್ಲಿ ಕೆಲವರಿಗೆ ಅಸಮಾಧಾನ ಇದ್ದುದು ಹೌದು; ವೈಯಕ್ತಿಕ ಮಾತುಕತೆಯ ನಂತರ ಬಹುತೇಕ ಅಸಮಾಧಾನಿತರು ಸಮಾಧಾನಿತರಾಗಿದ್ದಾರೆ. ಮತ್ತೊಮ್ಮೆ ಮೋದಿ ಎಂಬುದೇ ಎಲ್ಲರ ಗುರಿ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement