ಚಿತ್ರದುರ್ಗ : ಕೇಂದ್ರದಲ್ಲಿ ಹತ್ತು ವರ್ಷಗಳ ಕಾಲ ಅಧಿಕಾರ ನಡೆಸಿದ ಪ್ರಧಾನಿ ನರೇಂದ್ರಮೋದಿ ಇಡಿ, ಸಿಬಿಐ, ಆದಾಯ ತೆರಿಗೆ ಇಲಾಖೆಯನ್ನು ದುರುಪಯೋಗಪಡಿಸಿಕೊಂಡು ಮೊದಲಿನಿಂದಲೂ ಕಾಂಗ್ರೆಸ್ಗೆ ತೊಂದರೆ ಕೊಡುತ್ತ ಬರುತ್ತಿದ್ದಾರೆ. ದ್ವೇಷದ ರಾಜಕಾರಣ ಮಾಡುವ ಕೋಮುವಾದಿ ಬಿಜೆಪಿ.ಯನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಎ.ಐ.ಸಿ.ಸಿ. ಕಾರ್ಯದರ್ಶಿ ಮಯೂರ್ ಜೈಕುಮಾರ್ ಮನವಿ ಮಾಡಿದರು.
ದುರ್ಗದ ಸಿರಿ ಹೋಟೆಲ್ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ ಭರವಸೆಯಂತೆ ಐದು ಗ್ಯಾರೆಂಟಿಗಳನ್ನು ಜನತೆಗೆ ನೀಡಿದೆ. ಇದನ್ನು ಕಂಡು ಸಹಿಸದ ಬಿಜೆಪಿ. ಕೆಲವು ಕಾಂಗ್ರೆಸ್ ನಾಯಕರುಗಳ ನಿವಾಸಗಳ ಮೇಲೆ ದಾಳಿ ನಡೆಸುತ್ತಿರುವುದು ಎಷ್ಟು ಸರಿ? ಇ.ಎಂ.ವಿ. ದುರುಪಯೋಗಪಡಿಸಿಕೊಂಡು ಎರಡು ಬಾರಿ ಕೇಂದ್ರದಲ್ಲಿ ಮೋದಿ ಪ್ರಧಾನಿಯಾದರು. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಸರಳ ಸಜ್ಜನಿಕೆಯ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರನ್ನು ಗೆಲ್ಲಿಸಿ ಪಾರ್ಲಿಮೆಂಟ್ಗೆ ಕಳಿಸಿಕೊಡಿ ಎಂದು ವಿನಂತಿಸಿದರು.
ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಜಗದೀಶ್ ಮಾತನಾಡಿ ಹತ್ತು ವರ್ಷಗಳ ಕಾಲ ದೇಶವನ್ನು ಆಳಿದ ಬಿಜೆಪಿ. ಧರ್ಮದ ಹಿಂದೆ ಬಿದ್ದು ಸಂವಿಧಾನವನ್ನು ತಿರುಚಲು ಹೊರಟಿದೆ. ಎಲ್ಲದರಲ್ಲೂ ಹಸ್ತಕ್ಷೇಪ ಮಾಡುತ್ತಿದೆ. ಅಪ್ಪರ್ಭದ್ರಾ ಯೋಜನೆಗೆ ಐದು ಸಾವಿರದ ಮುನ್ನೂರು ಕೋಟಿ ರೂ.ಗಳನ್ನು ಮಂಜೂರು ಮಾಡಿ ಇದುವರೆವಿಗೂ ಒಂದು ಪೈಸೆಯನ್ನು ಬಿಡುಗಡೆಗೊಳಿಸಿಲ್ಲ. ರಾಜ್ಯದಿಂದ ಗೆದ್ದು ಹೋದ ಎಂ.ಪಿ.ಗಳು ಸಂಸತ್ನಲ್ಲಿ ರಾಜ್ಯದ ಪರ ಧ್ವನಿ ಎತ್ತಲಿಲ್ಲ. ಈ ಬಾರಿಯ ಲೋಕಸಭೆ ಚುನಾವಣೆ ದೇಶದ ಭವಿಷ್ಯದ ಚುನಾವಣೆ ಹಾಗಾಗಿ ಮತದಾರರು ಜಾಗೃತರಾಗಿ ಮತ ಚಲಾವಣೆ ಮಾಡುವಂತೆ ವಿನಂತಿಸಿದರು.
ಕಮ್ಯುನಿಸ್ಟ್ ಪಕ್ಷದ ಮುಖಂಡ ಜಿ.ಸಿ.ಸುರೇಶ್ಬಾಬು ಮಾತನಾಡುತ್ತ ಐಸಿಡಿಎಸ್. ಯೋಜನೆಯ 28 ಸಾವಿರ ಕೋಟಿಯಲ್ಲಿ ಹತ್ತು ಸಾವಿರ ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ. ಕಾರ್ಮಿಕರು, ರೈತರು, ಬಡವರ ಬದುಕು ದಿವಾಳಿಯಾಗುತ್ತಿದ್ದರೂ ನರೇಂದ್ರಮೋದಿ ಗಮನ ಕೊಡುತ್ತಿಲ್ಲ. ಆದ್ದರಿಂದ ಈ ಚುನಾವಣೆಯಲ್ಲಿ ನಮ್ಮ ಬೆಂಬಲ ಕಾಂಗ್ರೆಸ್ನ ಬಿ.ಎನ್.ಚಂದ್ರಪ್ಪನವರಿಗೆ ಎಂದು ಹೇಳಿದರು.
ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಮಂಜಪ್ಪ ಮಾತನಾಡಿ ದೇಶದ ಸಂವಿಧಾನ ರಕ್ಷಣೆಯಾದಾಗ ಮಾತ್ರ ಮೀಸಲಾತಿ ಎಂದಿನಂತೆ ಮುಂದುವರೆಯಲಿದೆ. ಅದಕ್ಕಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರನ್ನು ಗೆಲ್ಲಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಮಾತನಾಡುತ್ತ ರಾಷ್ಟ್ರೀಯ ಒಕ್ಕೂಟದ ತೀರ್ಮಾನದಂತೆ ಬೇರೆ ಪಕ್ಷಗಳು ತನ್ನ ಶಕ್ತಿಯನ್ನು ಧಾರೆ ಎರೆದಿವೆ. ಸರ್ವಾಧಿಕಾರ ಸಂವಿಧಾನ ರಕ್ಷಣೆ ನಡುವೆ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಬಹುಮತಗಳಿಂದ ಗೆಲ್ಲಿಸಿ ಎಂದು ವಿನಂತಿಸಿದರು.
ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಲಕ್ಷ್ಮಿಕಾಂತ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಸಮಾಜವಾದಿ ಪಕ್ಷದ ಮಹಿಳಾ ಅಧ್ಯಕ್ಷೆ ಜ್ಯೋತಿ, ಜೆ.ಜೆ.ಹಟ್ಟಿಯ ಡಾ.ಬಿ.ತಿಪ್ಪೇಸ್ವಾಮಿ, ರೈತ ಮಲ್ಲಿಕಾರ್ಜುನ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.