ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶನಿವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೋದಿಯವ್ರು ಹಿಂಸಾಚಾರ ಪೀಡಿತ ಮಣಿಪುರಕ್ಕೆ ಭೇಟಿ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
‘ಇದೇ ಮೊದಲ ಬಾರಿಗೆ ಪ್ರಧಾನಿಯೊಬ್ಬರು ಕರ್ನಾಟಕ, ರಾಜಸ್ಥಾನ ಮತ್ತು ಇತರ ಸ್ಥಳಗಳಿಗೆ ಚುನಾವಣೆಗಾಗಿ ಭೇಟಿ ನೀಡುತ್ತಿರುವುದನ್ನು ನಾನು ನೋಡಿದ್ದೇನೆ. ಆದರೆ ಮಣಿಪುರಕ್ಕೆ ಅಲ್ಲ. ಇಂದು ಮಣಿಪುರದಲ್ಲಿ ಅವರ ಸರ್ಕಾರ ಇದೆ. ಒಂದು ವೇಳೆ ಅಲ್ಲಿ ಕಾಂಗ್ರೆಸ್ ಸರ್ಕಾರ ಇರ್ತಿದ್ರೆ ಅವರು ಏನು ಹೇಳುತ್ತಿದ್ದರು ಎಂದು ಊಹಿಸಿ’ ಎಂದು ಸಿಎಂ ಗೆಹ್ಲೋಟ್ ಜೈಪುರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದರು.
ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುವ ಮತ್ತು ಕಿರುಕುಳ ನೀಡಿದ ವೀಡಿಯೊದ ಬಗ್ಗೆ ಪ್ರತಿಕ್ರಿಯಿಸುವಾಗ ರಾಜಸ್ಥಾನ ಮತ್ತು ಛತ್ತೀಸ್ ಗಢದಲ್ಲಿ ನಡೆದ ಘಟನೆಗಳನ್ನು ಉಲ್ಲೇಖಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರನ್ನು ಹಿರಿಯ ಕಾಂಗ್ರೆಸ್ ನಾಯಕ ಟೀಕಿಸಿದರು.
ಮೋದಿಯವರ ಹೇಳಿಕೆಯು ರಾಜಸ್ಥಾನದ ಭಾವನೆಗಳನ್ನು ನೋಯಿಸಿದೆ ಎಂದು ಹೇಳಿದರು. “ರಾಜಸ್ಥಾನ ಮತ್ತು ಛತ್ತೀಸ್ ಗಢದ ಮುಖ್ಯಮಂತ್ರಿಗಳು ತಮ್ಮ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ನೋಡಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ ರೀತಿ ರಾಜಸ್ಥಾನದ ಭಾವನೆಗಳನ್ನು ನೋಯಿಸಿದೆ” ಎಂದು ಗೆಹ್ಲೋಟ್ ಹೇಳಿದರು.
ಮಣಿಪುರದ ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿ ಮೋದಿ ಸಭೆ ನಡೆಸಬೇಕಿತ್ತು ಎಂದು ರಾಜಸ್ಥಾನ ಸಿಎಂ ಸಲಹೆ ನೀಡಿದರು. “ಪ್ರಧಾನಿ ಮೋದಿಗೆ ಮಣಿಪುರಕ್ಕೆ ಭೇಟಿ ನೀಡಲು ಸಾಧ್ಯವಾಗದಿದ್ದರೆ, ಅವರು ಸಭೆ ಕರೆದು ಮಣಿಪುರದ ಪರಿಸ್ಥಿತಿಯನ್ನು ಪರಿಶೀಲಿಸಬೇಕಿತ್ತು” ಎಂದು ಅವರು ಹೇಳಿದರು. ಮಣಿಪುರದಲ್ಲಿ ಇತ್ತೀಚೆಗೆ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ಗಮನಿಸಿದ ಪ್ರಧಾನಿ ಮೋದಿ, ತಮ್ಮ ಭಾಷಣದಲ್ಲಿ ರಾಜಸ್ಥಾನ ಮತ್ತು ಛತ್ತೀಸ್ ಗಢವನ್ನು ಉಲ್ಲೇಖಿಸುವಾಗ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಿಗಿಗೊಳಿಸುವಂತೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ ನಂತರ ಈ ಹೇಳಿಕೆಯನ್ನು ರಾಜಸ್ಥಾನ ಸಿಎಂ ನೀಡಿ ವಾಗ್ದಾಳಿ ನಡೆಸಿದರು.