ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಅವರು ತಮಗಾಗಿ ಮತ ಕೇಳುತ್ತಿಲ್ಲ, ಅಮಿತ್ ಶಾ ಅವರನ್ನು ಪ್ರಧಾನಿ ಮಾಡಲು ಮತ ಕೇಳುತ್ತಿದ್ದಾರೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಲಕ್ನೋದಲ್ಲಿ ಎಸ್ಪಿ ಕಚೇರಿಯಲ್ಲಿ ಮಾಜಿ ಸಿಎಂ ಅಖಿಲೇಶ್ ಯಾದವ್ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೋದಿ ಅವರು ಲೋಕಸಭೆ ಚುನಾವಣೆಯಲ್ಲಿ ಗೆದ್ದರೆ ಎರಡು ತಿಂಗಳೊಳಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪದಚ್ಯುತಿಗೊಳಿಸುತ್ತಾರೆ. ಇದರ ಜೊತೆಗೆ ಮೀಸಲಾತಿ ರದ್ದುಗೊಳಿಸಲಾಗುತ್ತದೆ ಎಂದರು.
ನರೇಂದ್ರ ಮೋದಿ ಪ್ರಧಾನಿಯಾದಾಗ ನಿವೃತ್ತಿ ವಯಸ್ಸನ್ನು 75 ವರ್ಷಕ್ಕೆ ನಿರ್ಣಯಿಸಿದರು. ಸುಮಿತ್ರಾ ಮಹಾಜನ್, ಮುರಳಿ ಮನೋಹರ ಜೋಶಿ, ಲಾಲ್ ಕೃಷ್ಣ ಅಡ್ವಾಣಿ ಇದಕ್ಕೆ ಉದಾಹರಣೆ. ಮುಂದಿನ ವರ್ಷ ಸೆ.17ಕ್ಕೆ ಮೋದಿಗೆ 75 ವರ್ಷ ತುಂಬಲಿದೆ ಎಂದರು.
ಅಮಿತ್ ಶಾ ಅವರನ್ನು ಪ್ರಧಾನಿ ಮಾಡಲು ಅವರ ಹಾದಿಯಲ್ಲಿದ್ದ ಕಂಟಕಗಳನ್ನು ಮೋದಿ ಹಂತ ಹಂತವಾಗಿ ತೆಗೆದುಹಾಕಿದರು. ವಸುಂಧರಾ ರಾಜೆ, ಸುಮಿತ್ರಾ ಮಹಾಜನ್, ಶಿವರಾಜ್ ಸಿಂಗ್ ಚೌಹಾಣ್, ಡಾ.ರಮಣ್ ಸಿಂಗ್ ಅವರನ್ನು ಮೂಲೆಗುಂಪು ಮಾಡಲಾಯಿತು. ಈಗ ಯೋಗಿ ಮಾತ್ರ ಅಡ್ಡಿಯಾಗಿದ್ದಾರೆ. ಅವರನ್ನು ತೆಗೆದುಹಾಕಲಾಗುವುದು ಎಂದರು.
ಬಿಜೆಪಿ 220 ಸ್ಥಾನಗಳಿಗಿಂತ ಹೆಚ್ಚು ಪಡೆಯುವುದಿಲ್ಲ. ರಾಜಸ್ಥಾನ, ಹರಿಯಾಣ, ಜಾರ್ಖಂಡ್, ದೆಹಲಿ, ಪಂಜಾಬ್ ಮತ್ತು ಬಂಗಾಳದಲ್ಲಿ ಬಿಜೆಪಿಯ ಸ್ಥಾನಗಳು ಕಡಿಮೆಯಾಗುತ್ತಿವೆ. ಜೂನ್ 4 ರಂದು ಭಾರತ ಸಮ್ಮಿಶ್ರ ಸರ್ಕಾರ ರಚನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಅಖಿಲೇಶ್ ಯಾದವ್, ಬಿಜೆಪಿ 400 ಗಡಿ ದಾಟುವ ಘೋಷಣೆ ಮಾಡಿದೆ. 543 ರಲ್ಲಿ 400ರ ಗಡಿ ದಾಟಿದರೆ ಉಳಿಯುವುದೇ 143 ಸ್ಥಾನಗಳು, ಬಿಜೆಪಿ ಅಷ್ಟೇ ಸ್ಥಾನಗಳನ್ನು ಪಡೆಯಲಿದೆ. ಭಾರತದ 140 ಕೋಟಿ ಜನರು ಬಿಜೆಪಿಯನ್ನು 140 ಸ್ಥಾನಗಳಿಗೆ ಸೀಮಿತ ಮಾಡಲಿದ್ದಾರೆ ಎಂದರು.