ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಮೂರನೇ ಅವಧಿಯ ಸರ್ಕಾರದಲ್ಲಿ ಒಟ್ಟು ನಾಲ್ಕು ಬದಲಾವಣೆಗಳಾಗಲಿವೆ ಎಂದು ಚುನಾವಣೆ ರಣತಂತ್ರಗಾರ ಪ್ರಶಾಂತ್ ಕಿಶೋರ್ ಹೇಳಿಕೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ನನ್ನ ಊಹೆಯ ಪ್ರಕಾರ ಪ್ರಧಾನಿ ಮೋದಿ ನೇತೃತ್ವದ 3.0 ಸರ್ಕಾರ ಬಹಳಷ್ಟು ಸದ್ದು ಮಾಡಲಿದೆ. ಕೇಂದ್ರದಲ್ಲಿ ಅಧಿಕಾರ ಮತ್ತು ಸಂಪನ್ಮೂಲ ಎರಡಕ್ಕೂ ಹೆಚ್ಚಿನ ಒತ್ತು ನೀಡಲಾಗುತ್ತದೆ. ಭ್ರಷ್ಟಾಚಾರ ನಿಗ್ರಹಕ್ಕೆ ಹೆಚ್ಚಿನ ಒತ್ತು ನೀಡುವ ಮೋದಿ ಸರ್ಕಾರ, ರಚನಾತ್ಮಕ ಮತ್ತು ಕಾರ್ಯಾತ್ಮಕ ಬದಲಾವಣೆಗಳನ್ನು ತರಲಿದೆ. ರಾಜ್ಯಗಳ ಆರ್ಥಿಕ ಸ್ವಾವಲಂಬನೆಯನ್ನು ಮೊಟಕುಗೊಳಿಸುವ ಸಾಧ್ಯತೆ ಇದೆ. ಅಲ್ಲದೇ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ಅಡಿಯಲ್ಲಿ ತಂದರೂ ಅಚ್ಚರಿ ಇಲ್ಲ’ ಎಂದು ಹೇಳುವ ಮೂಲಕ ಶಾಕ್ ಕೊಟ್ಟಿದ್ದಾರೆ. ಪೆಟ್ರೋಲ್, ಡೀಸೆಲ್, ATF ಮತ್ತು ನೈಸರ್ಗಿಕ ಅನಿಲಗಳ ಮೇಲೆ ವ್ಯಾಟ್, ಕೇಂದ್ರ ತೆರಿಗೆ ಮತ್ತು ಅಬಕಾರಿ ಟ್ಯಾಕ್ಸ್ ವಿಧಿಸಲಾಗುತ್ತಿದೆ. ಕೈಗಾರಿಕೆಗಳ ಬಹುದಿನದ ಬೇಡಿಕೆಯಂತೆ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿಯಡಿ ತಂದರೆ ರಾಜ್ಯ ಸರ್ಕಾರಗಳ ಆದಾಯಕ್ಕೆ ಬಹುದೊಡ್ಡ ಮಟ್ಟದಲ್ಲಿ ನಷ್ಟ ಉಂಟಾಗುವ ಸಾಧ್ಯತೆ ಇದೆ. ಅದೂ ಅಲ್ಲದೇ ಈ ನೀತಿಯಿಂದ ಕೇಂದ್ರದ ಮೇಲೆ ರಾಜ್ಯ ಸರ್ಕಾರಗಳು ಇನ್ನು ಹೆಚ್ಚಾಗಿ ಅವಲಂಬನೆ ಆಗುವ ಸಾಧ್ಯತೆ ಇದೆ.