ಶಿವಮೊಗ್ಗ ಈಗ ಮೋದಿ ಭಾವಚಿತ್ರ ಬಳಕೆ ವಿಚಾರದಲ್ಲಿ ತಮ್ಮ ವಾದವನ್ನೂ ಆಲಿಸುವಂತೆ ಕೋರಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಭಾವಚಿತ್ರ ಬಳಸುತ್ತಿದ್ದು, ಬಿಜೆಪಿ ನನ್ನ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದಲ್ಲಿ ಆ ಪ್ರಕರಣದಲ್ಲಿ ನನ್ನ ವಾದವನ್ನೂ ಆಲಿಸಬೇಕು ಎಂದು ಕೋರಿ ಹೈಕೋರ್ಟ್ನಲ್ಲಿ ಕೇವಿಯಟ್ ಸಲ್ಲಿಸಿದ್ದಾರೆ.
ರಾಷ್ಟ್ರಭಕ್ತರ ಬಳಗದ ಹೆಸರಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕೆ.ಎಸ್.ಈಶ್ವರಪ್ಪ ಸಿದ್ಧತೆ ನಡೆಸಿದ್ದಾರೆ. ಪ್ರಚಾರದ ವೇದಿಕೆ, ಫ್ಲೆಕ್ಸ್, ಬ್ಯಾನರ್ಗಳಲ್ಲಿ ಪ್ರಧಾನಿ ಮೋದಿ ಅವರ ಭಾವಚಿತ್ರ ಹಾಕಿಕೊಳ್ಳುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿ, ಸಂಸದ ಬಿ.ವೈ.ರಾಘವೇಂದ್ರ ಬಹಿರಂಗವಾಗಿಯೇ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಪ್ರಧಾನಿ ಮೋದಿ ಯಾರಪ್ಪನ ಮನೆಯ ಸ್ವತ್ತೂ ಅಲ್ಲ. ಅವರ ಭಾವಚಿತ್ರ ಬಳಸಿಯೇ ಸಿದ್ಧ ಎಂದು ಈಶ್ವರಪ್ಪ ತಿರುಗೇಟು ನೀಡಿದ್ದರು.
ಹೀಗಾಗಿಯೇ ಮೋದಿ ಅವರ ಭಾವಚಿತ್ರ ಬಳಕೆಗೆ ತಡೆಯಾಜ್ಞೆ ಕೋರಿ ಬಿಜೆಪಿ ಮುಖಂಡರು ಅರ್ಜಿ ಸಲ್ಲಿಸಿದಲ್ಲಿ ನನ್ನ ವಾದವನ್ನೂ ಪರಿಗಣಿಸುವಂತೆ ಕೇವಿಯಟ್ ಮೂಲಕ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.!