ಶಿಗ್ಗಾವಿ : ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು ಬಸವರಾಜ ಬೊಮ್ಮಾಯಿ ಪ್ಲಾನ್ ಮಾಡಿದ್ದರು. ಅದಕ್ಕೇ ಜೊತೆಯಲ್ಲಿದ್ದೇ ಯಡಿಯೂರಪ್ಪ ಅವರಿಗೆ ಟಾಂಗ್ ಕೊಟ್ಟರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದರು.
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಚಂದಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಗೆಲುವಿಗೆ ಪ್ರಚಾರ ಕೈಗೊಂಡು ಮಾತನಾಡಿದರು.ಮೋದಿ ಮಹಾನ್ ಸುಳ್ಳುಗಾರ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಮೋದಿ ಮತ್ತೆ ಪ್ರಧಾನಿ ಆದರೆ ದೇಶ ಬಿಟ್ಟು ಹೋಗ್ತೀನಿ ಎಂದು ದೇವೇಗೌಡರು ಹೇಳಿದ್ದರು. ಈಗ ಇಬ್ಬರೂ ಬಾಯಿ ಬಾಯಿ ಆಗಿದ್ದಾರೆ ಎಂದರು.
ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಅಭ್ಯರ್ಥಿಯನ್ನು ಆರಿಸುವ ಮತ್ತೊಂದು ಅವಕಾಶ ಶಿಗ್ಗಾವಿ ಕ್ಷೇತ್ರದ ಜನತೆಗೆ ಸಿಕ್ಕಿದೆ.ಇಲ್ಲಿನ ಬಿಜೆಪಿ ಅಭ್ಯರ್ಥಿ ಅತ್ಯಂತ ಶ್ರೀಮಂತ ಕುಟುಂಬದಿಂದ ಬಂದವರು. ಅವರಿಗೆ ಹಳ್ಳಿ ಬದುಕು ಗೊತ್ತಿಲ್ಲ. ಬಡವರ ಬದುಕು ಗೊತ್ತಿಲ್ಲ. ಆದರೆ ಕಾಂಗ್ರೆಸ್ ಅಭ್ಯರ್ಥಿ ಅತ್ಯಂತ ಸಾಮಾನ್ಯ ಕುಟುಂಬದಿಂದ ಬಂದು ಬಡವರ ಕಷ್ಟ, ಸುಖ ಗೊತ್ತಿರುವವರು. ಇವರನ್ನು ಗೆಲ್ಲಿಸಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿ ಆಗುತ್ತದೆ ಎಂದರು.
ನರೇಂದ್ರ ಮೋದಿ ಕುಟುಂಬ ರಾಜಕಾರಣದ ಬಗ್ಗೆ ಭರ್ಜರಿ ಭಾಷಣ ಮಾಡ್ತಾರೆ. ಆದರೆ ಇಲ್ಲಿ ಮಾಜಿ ಮುಖ್ಯಮಂತ್ರಿಯ ಮೊಮ್ಮಗ, ಮಾಜಿ ಮುಖ್ಯಮಂತ್ರಿಯ ಮಗನಿಗೆ ಟಿಕೆಟ್ ನೀಡಿದ್ದಾರೆ. ಇದು ಕುಟುಂಬ ರಾಜಕಾರಣ ಅಲ್ಲವೇ ಮೋದಿ ಯವರೇ?ನಾನು ನಾಡಿನ ಜನತೆಯ ಪ್ರೀತಿ, ಆಗ್ರಹಗಳಿಗೆ ಬಗ್ಗುತ್ತೇನೆಯೇ ಹೊರತು, ಬಿಜೆಪಿ ಮತ್ತು ದೇವೇಗೌಡರ ಷಡ್ಯಂತ್ರಗಳಿಗೆ ಬಗ್ಗದೂ ಇಲ್ಲ. ಜಗ್ಗದೂ ಇಲ್ಲ. ಎಲ್ಲಿಯವರೆಗೂ ರಾಜ್ಯದ ಜನರ ಆಶೀರ್ವಾದ ಇರುತ್ತದೋ ಅಲ್ಲಿಯವರೆಗೂ ನಾನು ಬಿಜೆಪಿ ಕುತಂತ್ರಗಳಿಗೆ ಬಗ್ಗುವುದಿಲ್ಲ ಎಂದು ಹೇಳಿದರು.
40 ವರ್ಷಗಳಿಂದ ನಾನು ಮಂತ್ರಿಯಾಗಿದ್ದೀನಿ. ಸಣ್ಣ ಕಪ್ಪು ಚುಕ್ಕೆ ಕೂಡ ನನ್ನ ಮೇಲಿಲ್ಲ. ಆದರೂ ನನ್ನ ಪತ್ನಿ ಮೇಲೆ ಸುಳ್ಳು ಆರೋಪ ಮಾಡಿ ನನ್ನನ್ನು ತೇಜೋವಧೆ ಮಾಡುತ್ತಿದ್ದಾರೆ.ಕೇವಲ 14 ಸೈಟುಗಳಿಗಾಗಿ ನಾನು ತಪ್ಪು ಮಾಡ್ತೀನಾ? ದುಡ್ಡು ಮಾಡಬೇಕು ಎಂದಿದ್ದರೆ ಬೇಕಾದಷ್ಟು ಮಾಡಬಹುದಿತ್ತು. ಆದರೆ ನನ್ನ ತಪ್ಪುಗಳು ಏನೇನೂ ಇಲ್ಲದ ಕಾರಣದಿಂದ ಸುಳ್ಳು ಆರೋಪ ಹೊರಿಸಿ ಷಡ್ಯಂತ್ರ ಹೆಣೆದು ನನ್ನನ್ನು ಕೆಳಗಿಳಿಸಲು ಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.