ಯಾವುದೇ ಶುಭ, ಅಶುಭ ಕಾರ್ಯವಿರಲಿ ದರ್ಬೆ ಕಡ್ಡಾಯ – ಏನಿದರ ಮಹತ್ವ? ಇಲ್ಲಿದೆ ವೈಜ್ಞಾನಿಕ ವಿವರಣೆ..

ಭಾರತೀಯ ಆಚಾರ-ವಿಚಾರ, ಪರಂಪರೆ, ಸಂಪ್ರದಾಯ ಹೀಗೆ ಪ್ರತಿಯೊಂದು ವಿಶಿಷ್ಟವಾಗಿರುತ್ತವೆ. ಮಾತ್ರವಲ್ಲ ಇವು ವೈಜ್ಞಾನಿಕ ತಳಹದಿಯ ಮೇಲೆ ರೂಪುಗೊಂಡಿರುತ್ತವೆ ಎನ್ನುವುದು ಮುಖ್ಯ ವಿಚಾರ. ಸಾಮಾನ್ಯವಾಗಿ ಬ್ರಾಹ್ಮಣರು ಶುಭ ಹಾಗೂ ಅಶುಭ ಕಾರ್ಯಗಳಲ್ಲಿ ತೊಡಗುವಾಗ ಧರ್ಬೆ ಹುಲ್ಲಿನ ಉಂಗುರ ಧರಿಸುತ್ತಾರೆ. ಅದರ ಹಿಂದೆಯೂ ವೈಜ್ಞಾನಿಕ ಕಾರಣವಿದೆ. ಅದೇನೆಂಬುದನ್ನು ನೋಡೋಣ:

ಪವಿತ್ರ ಹುಲ್ಲು

ದರ್ಬೆ ಎನ್ನುವುದು ಬಹಳ ಪವಿತ್ರವಾದ ಹುಲ್ಲು. ಇದರ ವೈಜ್ಞಾನಿಕ ಹೆಸರು Eragrostis cynosuroides. ಹಿಂದಿಯಲ್ಲಿ ಇದನ್ನು ಕುಸ್ ಅಥವಾ ಕುಶ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಗದ್ದೆಗಳಲ್ಲಿ, ತಂಪು ಇರುವ ಪ್ರದೇಶಗಳಲ್ಲಿ ಇದು ಸೊಂಪಾಗಿ ಬೆಳೆಯುತ್ತದೆ. ಇದರ ಎಲೆಯನ್ನು ಕತ್ತರಿಸಿ, ಒಣಗಿಸಿ ಬಳಸಲಾಗುತ್ತದೆ. ಬ್ರಾಹ್ಮಣರು ನಡೆಸುವ ಎಲ್ಲಾ ಕಾರ್ಯ, ಪೂಜೆಗಳಿಗೆ ಇದು ಬೇಕೇ ಬೇಕು. ಕಾರ್ಯ ನಡೆಸುವ ವ್ಯಕ್ತಿ ದರ್ಬೆಯಿಂದ ಮಾಡಿದ ಉಂಗುರ ಧರಿಸುವುದು ಕಡ್ಡಾಯ.

ವೈಜ್ಞಾನಿಕ ಕಾರಣ

ದರ್ಬೆ ಬಳಕೆಯ ಹಿಂದೆ ಧಾರ್ಮಿಕತೆಯ ಜೊತೆಗೆ ವೈಜ್ಞಾನಿಕ ಕಾರಣವೂ ಇದೆ. ದರ್ಬೆಯಲ್ಲಿ ಸೂರ್ಯನ ವಿಕಿರಣವನ್ನು ಹೀರಿಕೊಳ್ಳುವ ಶಕ್ತಿ ಅತ್ಯಧಿಕ ಪ್ರಮಾಣದಲ್ಲಿದೆ.

Advertisement

ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣ ಸಂದರ್ಭದಲ್ಲಿ ಹಿರಿಯರು ಆಹಾರ ಡಬ್ಬದಲ್ಲಿ ದರ್ಬೆಯನ್ನು ಇಡಲು ಇದೇ ಕಾರಣ. ಕೆಟ್ಟ ಕಿರಣಗಳನ್ನು ಇದು ಹೀರುತ್ತದೆ ಎನ್ನುವುದನ್ನು ಬಹಳ ಹಿಂದಿನಿಂದಲೇ ಕಂಡುಕೊಳ್ಳಲಾಗಿತ್ತು ಎನ್ನುವುದು ಗಮನಾರ್ಹ.

ಕೆಲವು ವೈದಿಕ ನುಡಿಗಟ್ಟು ಮತ್ತು ಶ್ಲೋಕಗಳನ್ನು ಪಠಿಸುವಾಗ ಬಲಗೈ ಉಂಗುರ ಬೆರಳಿಗೆ ದರ್ಬೆಯ ಉಂಗುರ ಧರಿಸಬೇಕು. ಅಗ್ನಿ ಸಂತಾನಂ, ತಿರು ಆಧಾನಂ ಮಾಡುವ ಸಂದರ್ಭದಲ್ಲೂ ಇದು ಅತ್ಯಗತ್ಯ. ಇನ್ನು ಕೆಲವೊಂದು ಕಾರ್ಯಗಳನ್ನು ನಡೆಸುವ ಸಂದರ್ಭದಲ್ಲಿ ಉಂಗುರ ಮಾಡಲು ಬಳಸುವ ಎಲೆಗಳ ಸಂಖ್ಯೆಯೂ ಮುಖ್ಯವಾಗುತ್ತದೆ.

ಉದಾಹರಣೆಗೆ ಸಾವಿಗೆ ಸಂಬಂಧಿಸಿದ ಕಾರ್ಯಗಳನ್ನು ನಡೆಸುವಾಗ ಒಂದೇ ದರ್ಬೆಯನ್ನು ಉಪಯೋಗಿಸುವುದು ವಾಡಿಕೆ. ಇನ್ನು ಅಮಾವಾಸ್ಯೆ ತರ್ಪಣ, ಪಿತೃ ಪೂಜೆ ಮುಂತಾದ ಸಂದರ್ಭಗಳಲ್ಲಿ ಮೂರು ಎಲೆಗಳ ಉಂಗುರ ಬಳಸಲಾಗುತ್ತದೆ.

ದೈನಂದಿನ ಶುಭ ಕಾರ್ಯಗಳಿಗೆ ಎರಡು ದರ್ಬೆ ಎಲೆಗಳನ್ನು ಬಳಸಲಾಗುತ್ತದೆ. ದೇವಾಲಯಗಳಲ್ಲಿ ನಾಲ್ಕು ದರ್ಬೆಗಳ ಉಂಗುರ ಧರಿಸಬೇಕಾಗುತ್ತದೆ. ಅಲ್ಲದೆ ಹೋಮದ ಸಂದರ್ಭದಲ್ಲಿ ಅಗ್ನಿಕುಂಡದ ನಾಲ್ಕು ಬದಿಗಳಲ್ಲಿ ಧರ್ಬೆ ಇರಿಸಬೇಕು.

ಯಾವುದೇ ಸಮಾರಂಭ ನಡೆಯುವ ಮೊದಲು ಸ್ಥಳವನ್ನು ಶುದ್ಧ ಮಾಡುವುದು ಅಗತ್ಯ. ಇದನ್ನು ಶುದ್ಧಿ ಪುಣ್ಯಾಹವಚನಂ ಎಂದು ಕರೆಯಲಾಗುತ್ತದೆ. ದರ್ಬೆಯನ್ನು ಕೈಯಲ್ಲಿ ಹಿಡಿದು ಮಂತ್ರ ಪಠಿಸಲಾಗುತ್ತದೆ. ಈ ಸಂದರ್ಭದಲ್ಲಿ ಧರ್ಬೆಯ ತುದಿಯನ್ನು ಪವಿತ್ರ ನೀರು ಹೊಂದಿರುವ ಪಾತ್ರೆಯಲ್ಲಿ ಇರಿಸಲಾಗುತ್ತದೆ. ಬಳಿಕ ಆ ದರ್ಬೆಯ ಮೂಲಕ ನೀರನ್ನು ಎಲ್ಲೆಡೆ ಸಿಂಪಡಿಸಲಾಗುತ್ತದೆ.

ಅನೇಕ ಶತಮಾನಗಳ ಹಿಂದೆಯೇ ಋಷಿ, ಮುನಿಗಳು ಇಂತಹ ವೈಜ್ಞಾನಿಕ ಅಂಶಗಳನ್ನು ಕಂಡುಕೊಂಡಿದ್ದರು. ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಸಂಶೋಧನೆ ನಡೆಯಬೇಕು ಎಂದು ವಿದ್ವಾಂಸರು ಹೇಳುತ್ತಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement