ಲಂಡನ್: ಬ್ರಿಟನ್ ಗೆ ಮೂರು ದಿನಗಳ ಪ್ರವಾಸ ಕೈಗೊಂಡಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಡಿ ೧೦ ರಂದು ಯುಕೆ ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿ ಮಾಡಿದ್ದಾರೆ.
ವರದಿಯಾ ಪ್ರಕಾರ, ಭಾರತ–ಬ್ರಿಟನ್ ದ್ವಿಪಕ್ಷೀಯ ಸಂಬಂಧ ವೃದ್ಧಿ ಉದ್ದೇಶದಿಂದ ಕೈಗೊಳ್ಳಲಾಗಿರುವ ಈ ಭೇಟಿ ಸಂದರ್ಭದಲ್ಲಿ ಉಭಯ ನಾಯಕರು ಹಲವು ದ್ವಿಪಕ್ಷೀಯ ವಿಷಯಗಳ ಕುರಿತು ಚರ್ಚೆ ನಡೆಸಿದರು. ಇದರೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ (ಎಫ್ಟಿಎ) ಮತ್ತು ಕೈಗಾರಿಕಾ ಸಹಕಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರೊಂದಿಗೆ ಸಭೆ ನಡೆಸಿದಷ್ಟೇ ಅಲ್ಲದೇ, ರಾಜನಾಥ್ ಸಿಂಗ್ ಅವರು ವಿದೇಶಾಂಗ ಸಚಿವ ಡೇವಿಡ್ ಕ್ಯಾಮರೂನ್ ಅವರನ್ನು ಭೇಟಿಯಾದರು. ಈ ಸಂದರ್ಭ ಭಾರತ-ಯುಕೆ ಸಂಬಂಧಗಳನ್ನು ಉತ್ತೇಜಿಸುವ ಮತ್ತು ದೇಶದ ರಕ್ಷಣಾ ಕ್ಷೇತ್ರದಲ್ಲಿ ಉಭಯ ದೇಶಗಳ ಪಾಲುದಾರಿಕೆ, ಭದ್ರತೆ, ಸಹಕಾರವನ್ನು ಗಟ್ಟಿಗೊಳಿಸುವ ಕುರಿತು ಬ್ರಿಟಿಷ್ ವಿದೇಶಾಂಗ ಸಚಿವ ಡೇವಿಡ್ ಕ್ಯಾಮರೂನ್ ಅವರೊಂದಿಗೆ ಪ್ರಾಯೋಗಿಕ ಚರ್ಚೆಗಳನ್ನು ನಡೆಸಲಾಯಿತು ಎಂದು ರಾಜನಾಥ್ ಸಿಂಗ್ ಸಾಮಾಜಿಕ ಮಾಧ್ಯಮದ ಮೂಲಕ ತಿಳಿಸಿದ್ದಾರೆ.