ಯುಪಿಎಸ್ ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ- 2ನೇ ಕನ್ನಡಿಗರು ಎಂಬ ಖ್ಯಾತಿಗೆ ಪಾತ್ರರಾದ ಕೋಲಾರದ ಕೆ.ಎಸ್. ನಂದಿನಿ

ಕೋಲಾರ: ನಿಮ್ಮ ಕನಸುಗಳು ನನಸಾಗುವ ಮೊದಲು ನೀವು ಕನಸು ಕಾಣಬೇಕು.ಆಗ ಮಾತ್ರ ಆ ವ್ಯಕ್ತಿ ತನ್ನ ಗುರಿಯನ್ನು ತಲುಪುವುದಕ್ಕೆ ಸಾಧ್ಯ ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಮಹಿಳಾ ಸಾಧಕಿ.

ಕೋಲಾರದ ಕೆಂಬೋಡಿ ಎಂಬ ಹಳ್ಳಿಯೊಂದರ ನಿವಾಸಿ ಶಿಕ್ಷಕ ಕೆ. ರಮೇಶ್ ಹಾಗೂ ವಿಮಲಮ್ಮ ಅವರ ಪುತ್ರಿಯಾಗಿರುವ ಕೆ.ಎಸ್ ನಂದಿನಿ ಕೋಲಾರದ ಚಿನ್ಮಯ ವಿದ್ಯಾಲಯದಲ್ಲಿ 2006ರಲ್ಲಿ 10ನೇ ತರಗತಿ ಮುಗಿಸಿ 208ರಲ್ಲಿ ಮೂಡಬಿದಿರೆಯಲ್ಲಿ ದ್ವಿತೀಯ ಪಿಯುಸಿ ಮುಗಿಸಿ ಬೆಂಗಳೂರಿನ ಎಂ.ಎಸ್. ರಾಮಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಮಾಡಿದ್ದಾರೆ.
ಇವರು ಕೇಂದ್ರ ಲೋಕಸೇವಾ ಆಯೋಗದ 2016ನೇ ಸಾಲಿನ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಕರ್ನಾಟಕಕ್ಕೆ ತಂದಿದ್ದಾರೆ.

ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ ಐಎಎಸ್ ಆಗುವ ಕನಸು ಕಂಡಿದ್ದ ಅದು ಈಗ ನಿಜವಾಗಿದೆ. ಈ ಹಿಂದೆ ವಿಜಯಲಕ್ಷ್ಮೀ ಬಿದರಿ ಹೊರತು ಪಡಿಸಿದರೆ ಇದುವರೆಗೂ ಕರ್ನಾಟಕದ ಅಭ್ಯರ್ಥಿಗಳು ಯಾರೂ ಪ್ರಥಮ ಸ್ಥಾನ ಪಡೆದಿರಲಿಲ್ಲ. ಇದೀಗ ನಂದಿನಿ ಮೇರು ಸಾಧನೆ ಮಾಡಿದ 2ನೇ ಕನ್ನಡಿಗರು ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

Advertisement

ನಂದಿನಿ ಕೆಲ ತಿಂಗಳು ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಐಎಎಸ್ ಮಾಡುವ ಉದ್ದೇಶದಿಂದ  ದೆಹಲಿಯ ಕರ್ನಾಟಕ ಭವನಕ್ಕೆ ಸಹಾಯಕ ಇಂಜಿನಿಯರ್ ಆಗಿ ವರ್ಗಾವಣೆಗೊಂಡಿದ್ದರು. 2014ರಲ್ಲಿ ಕೂಡ ಪರೀಕ್ಷೆ ಬರೆದಿದ್ದ ನಂದಿನಿ 849ನೇ ರ್ಯಾಂಕ್ ಪಡೆದಿದ್ದರು. ರ್ಯಾಂಕಿಂಗ್ ಕಡಿಮೆ ಬಂದ ಹಿನ್ನೆಲೆ ಅವರಿಗೆ ಐಆರ್ಎಸ್ ಸೇವೆಗೆ ಅವಕಾಶ ಸಿಕ್ಕಿತ್ತು. ಐಎಎಸ್ ಮಾಡಲೇಬೇಕೆಂಬ ಛಲದಿಂದ ದೆಹಲಿಯಲ್ಲಿ ವಿಶೇಷ ಕೋಚಿಂಗ್ ಪಡೆದಿದ್ದ ನಂದಿನಿ ಇದೀಗ ದೇಶಕ್ಕೆ ಮೊದಲ ರ್ಯಾಂಕ್ ಪಡೆದಿದ್ದಾರೆ. ಸದ್ಯ ಫರಿದಾಬಾದ್ ನಲ್ಲಿ ಐಆರ್ಎಸ್ ತರಬೇತಿ ಪಡೆಯುತ್ತಿದ್ದಾರೆ. ಇವರ ತಂದೆ ರಮೇಶ್ ಕೂಡ ಮಗಳ ವಿದ್ಯಾಭ್ಯಾಸದ ಸಲುವಾಗಿ ನಿಯೋಜನೆ ಮೇರೆಗೆ ದೆಹಲಿಯಲ್ಲಿ ನೆಲೆಸಿದ್ದರು.

ಇನ್ನು ಯುಪಿಎಸ್ ಸಿಯಲ್ಲಿ ಅಗ್ರ ಸ್ಥಾನ ಸಂಪಾದಿಸುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿರುವ ನಂದಿನಿ ಅವರು ತನ್ನ ಸಾಧನೆ ಕುರಿತು ಮಾತನಾಡಿದ್ದು “ಶಾಲಾ ಶಿಕ್ಷಕರಾಗಿರುವ ತಂದೆ ರಮೇಶ್ ಸಾಕ್ಷರತಾ ಅಭಿಯಾನದ ಸಂಯೋಜಕರಾಗಿದ್ದ ಸಂದರ್ಭ ಬೇರೆ ಊರಿಗೆ ಹೋಗುವಾಗ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಜಿಲ್ಲಾಧಿಕಾರಿಗಳ ಕಾರ್ಯವೈಖರಿ ಹೇಗೆ ಇರುತ್ತದೆ ಎಂಬುದನ್ನು ಆಗ ತಂದೆಯವರು ವಿವರಿಸುತ್ತಿದ್ದರು. ಅದೇ ನನಗೆ ಐಎಎಸ್ ಅಧಿಕಾರಿಯಾಗಲು ಪ್ರೇರಣೆಯಾಯಿತು. ನಾಲ್ಕು ವರ್ಷ ತುಂಬಾ ಕಷ್ಟ ಪಟ್ಟು ಅಭ್ಯಾಸ ಮಾಡಿದ್ದೇನೆ. ಆಳ್ವಾಸ್ ಮೂಡುಬಿದರೆಯಲ್ಲಿ ಪಿಯುಸಿ ಶಿಕ್ಷಣ ಪಡೆಯುತ್ತಿದ್ದಾಗ, ಅಲ್ಲಿನ ಶಿಕ್ಷಣ ವ್ಯವಸ್ಥೆ ಸಮಾಜಕ್ಕೆ ಏನಾದರೂ ಮಾಡಬೇಕೆಂಬ ಪರಿಕಲ್ಪನೆ ನನ್ನಲ್ಲಿ ತುಂಬಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ತಮ್ಮ ಮಗಳ ಸಾಧನೆ ಕುರಿತಂತೆ ಮಾತನಾಡಿರುವ ತಂದೆ ರಮೇಶ್ ಅವರು, ನಂದಿನಿ 5ನೇ ತರಗತಿಯಲ್ಲಿ ಓದುತ್ತಿಗಾಲೇ ಐಎಎಸ್ ಆಗುವ ಕನಸು ಕಂಡಿದ್ದಳು. ಕೋಲಾರದಲ್ಲಿ ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ. ರವಿ ಅವರ ಪ್ರೇರಣೆಯಿಂದ ನಂದಿನಿ ಐಎಎಸ್ ಮಾಡಲು ಪಣತೊಟ್ಟಿದ್ದಳು. ಕಠಿಣ ಪರಿಶ್ರಮ ಹಾಗೂ ಪ್ರಾಮಾಣಿಕತೆಯಿಂದ ಗುರಿ ಸಾಧಿಸಿದ್ದಾಳೆ. ಅವಳ ಸಾಧನೆ ಖುಷಿ ತಂದಿದೆ ಎಂದಿದ್ದಾರೆ.

ಅಂತೆಯೇ ಪ್ರಾಥಮಿಕ, ಪ್ರೌಢ, ಪಿಯುಸಿ ಹಾಗೂ ಎಂಜಿನಿಯರಿಂಗ್ ಶಿಕ್ಷಣ ನೀಡಿದ ಎಲ್ಲಾ ಸಂಸ್ಥೆಗೆ ನಂದಿ ಅವರು ಅವರು ಧನ್ಯವಾದ ತಿಳಿಸಿದ್ದು ದಿನಕ್ಕೆ ಕನಿಷ್ಠ 8 ರಿಂದ 9 ಗಂಟೆ ಅಭ್ಯಾಸವನ್ನು ಮಾಡಿದರೆ ಯುಪಿಎಸ್ಸಿ ಪಾಸಾಗುವುದು ಕಷ್ಟವಲ್ಲ. ಶಾಲಾ ದಿನಗಳಿಂದಲೇ ಗಣಿತ ಹೊರತುಪಡಿಸಿ ಎಲ್ಲಾ ವಿಷಯದಲ್ಲೂ ಟಾಪ್ ಬರುತ್ತಿದ್ದೆ. ಗಣಿತ ಏಕೆ ಕಷ್ಟವಾಗುತಿತ್ತು ಎಂಬುದು ಇಂದಿಗೂ ನನಗೆ ಯಕ್ಷ ಪ್ರಶ್ನೆಯಾಗೆಯೇ ಉಳಿದಿದೆ. ಮನಸ್ಸು ಮತ್ತು ಶ್ರಮಪಟ್ಟು ಪ್ರಯತ್ನಿಸಿದರೆ ಪ್ರತಿಫಲ ಸಿಕ್ಕೇ ಸಿಗುತ್ತದೆ. ಆದರೆ, ಅದಕ್ಕೆ ಸ್ವಲ್ಪ ಕಾಯಬೇಕಾಗುತ್ತದೆ.2013ರಲ್ಲಿ ಯುಪಿಎಸ್ಸಿ ಪರೀಕ್ಷೆ ತೆಗೆದುಕೊಂಡಿದ್ದೆ. ಆ ವರ್ಷ ತೇರ್ಗಡೆ ಹೊಂದಲು ಸಾಧ್ಯವಾಗಿಲ್ಲ. ಮತ್ತೆ 2014ರಲ್ಲಿ ಬರೆದು 849 ರ್ಯಾಂಕ್ ಪಡೆದೆ. 2015ರಲ್ಲಿ ಇನ್ನು ಕಡಿಮೆ ರ್ಯಾಂಕ್ ಬಂತು. ಐಸಿಎಸ್ ಸೇರಿದೆ. 2016ರ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಬಂದಿದೆ. ಯಾವುದೇ ಒತ್ತಡ ಇರಲಿಲ್ಲ. ಮನೆಯರು, ಸ್ನೇಹಿತರು ಹೀಗೆ ಎಲ್ಲರೂ ಉತ್ತಮ ಸಹಕಾರ ನೀಡಿದ್ದಾರೆ ಎಂದು ನಂದಿನಿ ತನ್ನ ಸಾಧನೆಗೆ ಬೆನ್ನಲುಬಾಗಿ ನಿಂತವರನ್ನು ಈ ಸಂದರ್ಭ ಸ್ಮರಿಸಿಕೊಂಡಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement