ಹೊಸದಿಲ್ಲಿ:ದೇಶದ ಆರ್ಥಿಕ ಪ್ರಗತಿ ದೃಷ್ಟಿಯಿಂದ ಭಾರತದ ಯುವಜನರು ವಾರಕ್ಕೆ 70 ಗಂಟೆ ಕಾಲ ದುಡಿಯಬೇಕು ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ನೀಡಿರುವ ಸಲಹೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ತಮಗಾಗಿ , ಕುಟುಂಬಕ್ಕಾಗಿ ಸಮಯ ನೀಡಲಾಗದೆ ಯುವ ಜನತೆ ಕೆಲಸದ ಒತ್ತಡದಿಂದ ಈಗಾಗಲೇ ಚಿಕ್ಕ ವಯಸ್ಸಿನಲ್ಲಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹೀಗಿರುವಾಗ ದಿನಕ್ಕೆ 12 ಗಂಟೆಗಳ ಸರಾಸರಿಯಲ್ಲಿ ದುಡಿಯಬೇಕು ಎಂದು ಕರೆ ನೀಡುವುದು ದೇಶದ ಆರೋಗ್ಯ ವ್ಯವಸ್ಥೆಯೇ ಕುಸಿದು ಬೀಳಬಹದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ, ಕಾರ್ಪೊರೇಟ್ ಕಂಪೆನಿಗಳು ದೇಶದ ಪ್ರಗತಿ ನೆಪದಲ್ಲಿ ಕಾರ್ಪೊರೇಟ್ ಕಂಪೆನಿಗಳು ತಮ್ಮ ಲಾಭಕ್ಕಾಗಿ ಬೇಳೆ ಬೇಯಿಸಿಕೊಳ್ಳುವ ಕೆಲಸ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಇನ್ನು ಈ ಬಗ್ಗೆ ವೈದ್ಯರುಗಳು ಕೂಡ ಅಸಮಾಧಾನಗೊಂಡಿದ್ದು, ನಾರಾಯಣ ಮೂರ್ತಿ ಅವರ ಹೇಳಿಕೆ ಜಾರಿಯಾದರೆ ಉಂಟಾಗುವ ಅಪಾಯಗಳ ಬಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ದೀಪಕ್ ಕೃಷ್ಣಮೂರ್ತಿ ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆ ನೀಡಿದ್ದಾರೆ. ಕಾರ್ಪೊರೇಟ್ ಕಂಪೆನಿಗಳು ಉದ್ಯೋಗಿಗಳನ್ನು ದುಡಿಸಿಕೊಂಡು, ಅವರಿಗೆ ಬಿಡಿಗಾಸಿನ ಸಂಬಳ ನೀಡುವ ಬಗ್ಗೆಯೂ ಅಸಮಾಧಾನಗೊಂಡಿದ್ದಾರೆ.
ಉದ್ಯಮಿಗಳ ಸಲಹೆಯಂತೆ ದಿನಕ್ಕೆ 12 ಗಂಟೆ ದುಡಿಮೆ ಮಾಡಿದರೆ ಏನೆಲ್ಲಾ ಅನಾಹುತಗಳು ಸಂಭವಿಸಬಹುದು ಎಂಬುದನ್ನು ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ ಖಾತೆಯಲ್ಲಿ ವಿವರಿಸಿದ್ದಾರೆ. ಅಲ್ಲದೇ ಕಂಪನಿಗಳು ಕೆಲಸದ ಅವಧಿ ಮುಗಿದ ಬಳಿಕವೂ ಉದ್ಯೋಗಿಗಳಿಂದ ಕೆಲಸ ಮಾಡಿಸಿಕೊಳ್ಳುತ್ತಾರೆ. ಇದರಿಂದ ಚಿಕ್ಕ ವಯಸ್ಸಿನಲ್ಲಿಯೇ ಜನರಿಗೆ ಹೃದಯಾಘಾತಗಳು ಉಂಟಾಗುತ್ತಿರುವುದು ಏಕೆ ಎಂದು ಅಚ್ಚರಿಪಡುವ ಅಗತ್ಯವೇ ಇಲ್ಲ ಎಂದು ಅವರು ಹೇಳಿದ್ದಾರೆ.
ಮದುವೆಯಾಗಬೇಡಿ, ಮಕ್ಕಳು ಮಾಡಿಕೊಳ್ಳಬೇಡಿ. ಕೆಲಸ ಜೀವನದ ಸಮತೋಲನದ ಬಗ್ಗೆ ಯೋಚಿಸಲೂ ಹೋಗಬೇಡಿ. ಕಂಪೆನಿಗಳಿಗಾಗಿ 12 ಗಂಟೆ ಕಾಲ ಕೆಲಸ ಮಾಡಿ. ಇದರಿಂದ ಅವರು ಲಕ್ಷಗಟ್ಟಲೆ ಲಾಭ ಗಳಿಸಬಹುದು .ಆದರೆ ನಿಮಗೆ ಕಡಲೆಬೀಜದಷ್ಟು ನೀಡಬಹುದು ಅಷ್ಟ್ರೇ . ಇದು ಅದ್ಭುತ ಸಲಹೆ ಎಂದು ಟೀಕಿಸಿದ್ದಾರೆ.