ಉಳ್ಳಾಲ: ಉಳ್ಳಾಲ ನಗರಸಭೆ ಕಸ ಸಂಗ್ರಹ ವಾಹನವೊಂದರ ಬಾಗಿಲು ತೆರೆಯಲು ಸಾಧ್ಯವಿಲ್ಲದ ಸ್ಥಿತಿ ತಲುಪಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಸ ಸಂಗ್ರಹ ವಾಹನದ ಬಾಗಿಲು ತೆರೆಯಾಲಾಗದ ಪರಿಸ್ಥಿತಿ ತಲುಪಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಚಾಲಕ ಅತ್ಯಂತ ಸಾಹಸ ಪಟ್ಟು ವಾಹನದೊಳಗೆ ಹೊಗುವ ದೃಶ್ಯ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನು ಅಪಾಯಕಾರಿ ಸ್ಥಿತಿಯಲ್ಲಿ ವಾಹನವಿದ್ದು ಅದೇ ವಾಹನದಲ್ಲಿ ಕಸ ಸಂಗ್ರಹಕ್ಕೆ ಕಾರ್ಮಿಕರು ತೆರಳುತ್ತಾರೆ. ಈ ರೀತಿಯ ಅಪಾಯಕಾರಿ ವಾಹನಕ್ಕೆ ಅಫಘಾತವಾದರೆ ಯಾರು ಹೊಣೆ, ಕಾರ್ಮಿಕರ ಪ್ರಾಣಕ್ಕೆ ಬೆಲೆ ಇಲ್ಲವೇ..? ಅಧಿಕಾರಿಗಳು, ಶಾಸಕ ಯು.ಟಿ ಖಾದರ್ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಬಗ್ಗೆ ಉಳ್ಳಾಲ ನಗರಸಭೆಯ ಪ್ರಭಾರ ಪೌರಾಯುಕ್ತೆ ವಾಣಿ ವಿ ಆಳ್ವ ಪ್ರತಿಕ್ರಿಯೆ ನೀಡಿದ್ದು, ಈ ವಾಹನ ಏಳು ವರ್ಷ ಹಳೆಯದ್ದಾಗಿದ್ದು, ದುರಸ್ಥಿ ಮಾಡಲು ಅಸಾಧ್ಯವಾಗಿದೆ. ಹೊಸ ಆಟೋ ಟಿಪ್ಪರ್ ವಾಹನ ಖರೀದಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ. ಈ ಬಗ್ಗೆ ಶಾಸಕ ಖಾದರ್ ಗಮನಕ್ಕೂ ತರಲಾಗಿದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ವಿಧಾನಸಭೆಯ ಸಭಾಧ್ಯಕ್ಷರ ತವರು ಕ್ಷೇತ್ರದಲ್ಲೇ ಆಡಳಿತ ವ್ಯವಸ್ಥೆ ಅವ್ಯವಸ್ಥೆಯ ಗೂಡಾಗಿದ್ದು, ಜನ ಛೀಮಾರಿ ಹಾಕುತ್ತಿದ್ದಾರೆ.