ಮುಂಬೈ: ದಿಗ್ಗಜ ಉದ್ಯಮಿ, ಟಾಟಾ ಸನ್ಸ್ನ ಎಮಿರಿಟಸ್ ಚೇರ್ಮನ್ ರತನ್ ಟಾಟಾ ಅವರು 9 ಅಕ್ಟೋಬರ್ 2024ರಂದು ತಮ್ಮ 86ನೇ ವಯಸ್ಸಿನಲ್ಲಿ ನಿಧನರಾದರು. ಅವರ ನಮ್ಮನ್ನು ಅಗಲಿ ಇನ್ನೂ ಒಂದು ತಿಂಗಳು ಆಗಿಲ್ಲ.
ಅದಾಗಲೇ ಟಾಟಾ ಟ್ರಸ್ಟ್‌ನ ಮ್ಯಾನೇಜ್‌ಮೆಂಟ್‌ನಲ್ಲಿ ದೊಡ್ಡ ಬದಲಾವಣೆಗಳಾಗುವ ಸೂಚನೆಗಳು ಸಿಕ್ಕಿದೆ. ಟಾಟಾ ಟ್ರಸ್ಟ್‌ನ ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚಗಳನ್ನು ಸುಗಮಗೊಳಿಸಲು ಆಂತರಿಕವಾಗಿ ಮ್ಯಾನೇಜ್‌ಮೆಂಟ್ ಪುನರ್‌ರಚನೆ ಕಾರ್ಯವನ್ನು ಕೈಗೊಳ್ಳುತ್ತಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಕಂಪನಿಗೆ ಒಟ್ಟು 180 ಕೋಟಿಯನ್ನು ಸಿಬ್ಬಂದಿಗಾಗಿ ವೆಚ್ಚ ಮಾಡಬೇಕಿತ್ತು. 2022ರಲ್ಲಿ, ನೇರ ಅನುಷ್ಠಾನ ಯೋಜನೆಗಳೆಂದು ಕರೆಯಲ್ಪಡುವ ಹೆಚ್ಚುವರಿ ವೆಚ್ಚಗಳು ಒಟ್ಟು ಉದ್ಯೋಗಿಗಳ ವೆಚ್ಚವನ್ನು 400 ಕೋಟಿಗೆ ಏರಿಸಿದ್ದವು.
ಈ ವರದಿಯನ್ನು ಟ್ರಸ್ಟ್‌ನ ಅಧಿಕಾರಿಗಳು ಕೂಡ ಪರಾಮರ್ಶಿಸಿದ್ದರು. ನೇರ ಅನುಷ್ಠಾನ ಯೋಜನೆಗಳು ಅಂದರೆ ನೇರವಾಗಿ ಗುತ್ತಿಗೆದಾರರ ಮೂಲಕ ದೇಣಿಗೆಯಾಗಿ ಟ್ರಸ್ಟ್‌ನಿಂದ ಕಾರ್ಯಗತಗೊಳಿಸಲಾಗುತ್ತದೆ . ಇದನ್ನೂ ಕೂಡ ಕನಿಷ್ಠಕ್ಕೆ ಇಳಿಸಲಾಗುತ್ತದೆ. ಮತ್ತು ಈಗಿರುವ ಜವಾಬ್ದಾರಿಗಳನ್ನು ಪೂರೈಸಲು ಮಾತ್ರವೇ ಬಳಸಲಾಗುತ್ತದೆ. ಆದರೆ, ಈ ಬಗ್ಗೆ ಟಾಟಾ ಟ್ರಸ್ಟ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮುಖ್ಯ ಕಾರ್ಯನಿರ್ವಾಹಕ ಸಿದ್ಧಾರ್ಥ್ ಶರ್ಮಾ ಅವರು ಪರಿಣಾಮಕಾರಿ ಆಡಳಿತಕ್ಕಾಗಿ ಚೆಕ್ ಮತ್ತು ಬ್ಯಾಲೆನ್ಸ್ ಅನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ ಮತ್ತು ಪ್ರಕ್ರಿಯೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಾರೆ. ಹೊಸ ಬದಲಾವಣೆಗಳ ನಂತರ ಟಾಟಾ ಟ್ರಸ್ಟ್‌ನ ಮುಖ್ಯ ಹಣಕಾಸಿ ಅಧಿಕಾರಿ (ಸಿಎಫ್‌ಓ) ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಒಒ) ಅನ್ನೋ ಹುದ್ದೆಗಳೇ ಇರೋದಿಲ್ಲ. ಅದರೊಂದಿಗೆ ಔಟ್‌ಸೋರ್ಸ್ ಮಾಡುತ್ತಿದ್ದ ಕನ್ಸಲ್ಟೆಂಟ್‌ಗಳ ಮೇಲಿನ ಅವಲಂಬನೆಯನ್ನೂ ಕೂಡ ಕಡಿತ ಮಾಡಲಾಗುತ್ತಿದೆ. ಹೊಸ ಟ್ರಸ್ಟ್‌ನ ಅಧ್ಯಕ್ಷ ನೋಯೆಲ್ ಟಾಟಾ ಅವರನ್ನು ನೇಮಿಸುವ ಮೊದಲೇ ಈ ಕ್ರಮವನ್ನು ಪ್ರಾರಂಭಿಸಲಾಗಿತ್ತು ಎನ್ನುವುದು ಮುಖ್ಯ. ಈಗ ಅದಕ್ಕೆ ಅಧ್ಯಕ್ಷರ ಅನುಮೋದನೆಯೂ ಸಿಕ್ಕಿದೆ. ಕಂಪನಿಯ ಆಂತರಿಕ ಲೆಕ್ಕಪರಿಶೋಧನಾ ವರದಿಯು ಸಿಬ್ಬಂದಿಯ ವೆಚ್ಚದಲ್ಲಿ ಭಾರೀ ಏರಿಕೆ ಆಗಿರುವುದನ್ನು ಬಹಿರಂಗಪಡಿಸಿತ್ತು. ಇದರ ಬೆನ್ನಲ್ಲಿಯೇ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. “ಟ್ರಸ್ಟ್ ಸಾರ್ವಜನಿಕರ ಸೇವಕನಂತೆ ಕಾರ್ಯನಿರ್ವಹಿಸಬೇಕು. ನಾವು ಟ್ರಸ್ಟ್‌ಗಳೊಳಗಿನ ಹಣ ಮತ್ತು ಆಸ್ತಿಯ ನಿಜವಾದ ಪಾಲಕರಾಗಿರಬೇಕು..’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾರ್ಯಾಚರಣೆಯ ಗಾತ್ರ ಮತ್ತು ಪ್ರಮಾಣವು ಹಿರಿಯ ಸಿಬ್ಬಂದಿ ಸೇರಿದಂತೆ ಕಾರ್ಯಾಚರಣೆಯ ವೆಚ್ಚಗಳ ಅಗತ್ಯವನ್ನು ನಿರ್ದೇಶಿಸುತ್ತದೆ, ಸಮಾಜಮುಖಿ ಸಂಸ್ಥೆಗಳಿಗೆ ವೆಚ್ಚದ ಪ್ರಜ್ಞೆಯು ನಿರ್ಣಾಯಕವಾಗಿದೆ ಎಂದು ಕಾನೂನು ಸಂಸ್ಥೆ DSK ಲೀಗಲ್‌ನ ವ್ಯವಸ್ಥಾಪಕ ಪಾಲುದಾರ ಆನಂದ್ ದೇಸಾಯಿ ತಿಳಿಸಿದ್ದಾರೆ.