ಜಗತ್ತಿನಲ್ಲಿ ಅಲ್ಪ ಸ್ವಲ್ಪ ಇದ್ದವರು ಆರ್ಭಟ ನೋಡಿದ್ರೆ ಕೋಟ್ಯಾಧಿಪತಿಗಳೇನು ಎನ್ನುವಂತೆ ನಡೆದುಕೊಳ್ಳುತ್ತಾರೆ ಆದ್ರೆ ರತನ್ ಟಾಟಾ ಅವರ ಕಿರಿಯ ಸಹೋದರ ಜಿಮ್ಮಿ ಟಾಟಾ ಯಾವತ್ತೂ ಪ್ರಚಾರಕ್ಕೆ ಸಿಲುಕಿದವರಲ್ಲ. ಮುಂಬೈನಲ್ಲಿ ಬಹಳ ಸರಳ ಜೀವನ ನಡೆಸುತ್ತಿದ್ದಾರೆ. ಡಬಲ್ ಬೆಡ್ರೂಮ್ ಅಪಾರ್ಟ್ಮೆಂಟ್ನಲ್ಲಿ ಬದುಕು ಸವೆಸುತ್ತಿರುವ ಅವರ ಬಳಿ ಒಂದು ಮೊಬೈಲ್ ಫೋನ್ ಕೂಡ ಇಲ್ಲ.
ಹೌದು ರತನ್ ಟಾಟಾ ನಂತರ ಮುಂದ್ಯಾರು ಎನ್ನುವ ಪ್ರಶ್ನೆ ಎದ್ದ ಬೆನ್ನಲ್ಲೇ ಎಲ್ಲರ ಚಿತ್ತ ಟಾಟಾ ಫ್ಯಾಮಿಲಿಯತ್ತ ಹೊರಳಿದೆ. ರತನ್ ಟಾಟಾ ಅವರ ತಂದೆ ನವಲ್ ಟಾಟಾಗೆ ಇಬ್ಬರು ಪತ್ನಿಯರು. ಮೊದಲ ಪತ್ನಿಯ ಮಕ್ಕಳೇ ರತನ್ ಮತ್ತು ಜಿಮ್ಮಿ ಟಾಟಾ. ಎರಡನೇ ಪತ್ನಿಯ ಮಗ ನೋಯಲ್ ಟಾಟಾ. ಈಗ ನೋಯಲ್ ಟಾಟಾದ ಮೂವರು ಮಕ್ಕಳಲ್ಲಿ ಒಬ್ಬರಿಗೆ ಟಾಟಾ ವಾರಸುದಾರಿಕೆ ಸಿಗಬಹುದು ಎನ್ನಲಾಗುತ್ತಿದೆ.
ಹಾಗಾದರೆ, ರತನ್ ಅವರ ಕಿರಿಯ ಸಹೋದರ ಜಿಮ್ಮಿ ಟಾಟಾ ಅವರದ್ದೇನು ಪಾತ್ರ..? ಜಿಮ್ಮಿ ಟಾಟಾ ಎಲ್ಲಾ ಇದ್ದೂ ಏನೂ ಇಲ್ಲದಂತಹ ಸರಳ ಜೀವನ ನಡೆಸುತ್ತಿದ್ದಾರೆ. ಟಾಟಾ ಗ್ರೂಪ್ನ ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ಟಾಟಾ ಸನ್ಸ್, ಟಿಸಿಎಸ್, ಟಾಟಾ ಪವರ್, ಇಂಡಿಯನ್ ಹೋಟೆಲ್ಸ್ ಇತ್ಯಾದಿ ಕಂಪನಿಗಳಲ್ಲಿ ಸಾಕಷ್ಟು ಷೇರುಪಾಲು ಹೊಂದಿದ್ದಾರೆ.
ಹಲವು ಸಾವಿರ ಕೋಟಿ ರೂಗಳ ಮೌಲ್ಯದ ಸಂಪತ್ತು ಅವರಲ್ಲಿದೆ. ಒಂದು ಅಂದಾಜು ಪ್ರಕಾರ ರತನ್ ಟಾಟಾ ಮತ್ತು ಜಿಮ್ಮಿ ಟಾಟಾ ಇಬ್ಬರ ನಿವ್ವಳ ಆಸ್ತಿ ಸೇರಿಸಿದರೆ 20,000 ಕೋಟಿ ರೂಗೂ ಅಧಿಕ ಇದೆ. ಆದರೂ ಕೂಡ ಜಿಮ್ಮಿ ಬಹಳ ಸರಳ ಜೀವನ ನಡೆಸುತ್ತಿದ್ದಾರೆ. ಬಿಸಿನೆಸ್ನ ರಗಳೆಗಳಿಂದ ದೂರವೇ ಉಳಿದು ನೆಮ್ಮದಿಯಲ್ಲಿದ್ದಾರೆ. ಮುಂಬೈನ ಕೊಲಾಬದಲ್ಲಿ ಸರಳವಾದ ಡಬಲ್ ಬೆಡ್ರೂಮ್ನ ಅಪಾರ್ಟ್ಮೆಂಟ್ವೊಂದರಲ್ಲಿ ಅವರು ವಾಸಿಸುತ್ತಿದ್ದಾರೆ. ತಾನಾಯಿತು, ಓದಾಯಿತು, ಆಟವಾಯಿತು, ಇದೇ ಅವರ ಜೀವನ. ಬಿಸಿನೆಸ್ ಮಾತ್ರವಲ್ಲ, ಸೆಲ್ ಫೋನ್ ರಗಳೆಯಿಂದಲೂ ಅವರು ದೂರ ಉಳಿದಿದ್ದಾರೆ. ಅವರ ಬಳಿ ಮೊಬೈಲ್ ಫೋನೇ ಇಲ್ಲವಂತೆ. ಓದುವುದೇ ಅವರ ಪ್ರಮುಖ ಟೈಮ್ ಪಾಸ್.