ಭೋಪಾಲ್ : ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ರಸ್ತೆ ನಿರ್ಮಾಣದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಟ್ರಕ್ ನಿಂದ ಜಲ್ಲಿಕಲ್ಲು ಮಣ್ಣು ಸುರಿದು ಭಾಗಶಃ ಸಮಾಧಿ ಮಾಡಿದ ಘಟನೆ ನಡೆದಿದೆ.
ಮಂಗವಾ ಪೊಲೀಸ್ ಠಾಣಾ ವ್ಯಾಪ್ತಿಯ ಹಿನೋಟಾ ಜೊರೊಟ್ ಗ್ರಾಮದಲ್ಲಿ ಖಾಸಗಿ ಭೂಮಿಯಲ್ಲಿ ರಸ್ತೆ ನಿರ್ಮಾಣವನ್ನು ವಿರೋಧಿಸುತ್ತಿದ್ದ ಮಮತಾ ಪಾಂಡೆ ಮತ್ತು ಆಶಾ ಪಾಂಡೆ ಎಂಬ ಮಹಿಳೆಯರನ್ನು ಕುತ್ತಿಗೆಯವರೆಗೆ ಹೂಳಲಾಗಿತ್ತು. ಈ ಘಟನೆಯ ವೀಡಿಯೊದಲ್ಲಿ ಇಬ್ಬರು ಮಹಿಳೆಯರು ಜಲ್ಲಿ ತುಂಬಿದ ಟ್ರಕ್ ನ ಹಿಂದೆ ಕುಳಿತಿರುವುದನ್ನು ತೋರಿಸಲಾಗಿದೆ. ನಂತರ ಅವರನ್ನು ಸ್ಥಳೀಯರು ರಕ್ಷಿಸಿ ಚಿಕಿತ್ಸೆಗಾಗಿ ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಸದ್ಯ ಮಹಿಳೆಯರ ಆರೋಗ್ಯ ಸ್ಥಿರವಾಗಿದ್ದು, ಅವರನ್ನು ಆರೋಗ್ಯ ಕೇಂದ್ರದಿಂದ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವೈರಲ್ ವಿಡಿಯೋ ಆಧರಿಸಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಆರೋಪಿಗಳಲ್ಲಿ ಓರ್ವನನ್ನು ಬಂಧಿಸಿದ್ದು, ಇತರ ಇಬ್ಬರು ಇನ್ನೂ ಪರಾರಿಯಾಗಿದ್ದಾರೆ. ಇನ್ನು ಈ ಘಟನೆಯ ಬಗ್ಗೆ ಮಾತನಾಡಿದ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿ ಜೈದೀಪ್ ಪ್ರಸಾದ್, ಇದು ಭೂ ವಿವಾದದ ಕುಟುಂಬ ವಿಷಯವಾಗಿದೆ ಎಂದು ಹೇಳಿದರು.