ಚಿತ್ರದುರ್ಗ: ರಸ್ತೆ ಬದಿಗಳಲ್ಲಿ, ಫುಟ್ ಬಾತ್ ಗಳಲ್ಲಿ, ಸಂತೇ ಮಾರುಕಟ್ಟೆಗಳಲ್ಲಿ ಖಾದಿ ಮತ್ತು ಚರಕ ಮಾರಾಟವಾಗುವಂತೆ ಆದಾಗ ಗಾಂಧೀಜಿಯವರ ಕನಸಿನ ಭಾರತವನ್ನು ಕಟ್ಟಲು ಅನುಕೂಲಕರವಾಗುತ್ತದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರ ಡಾ. ಎಚ್. ಕೆ . ಎಸ್ ಸ್ವಾಮಿ ಅವರು ಕರೆ ನೀಡಿದರು.
ಅವರು ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಮುಂಭಾಗದಲ್ಲಿರುವ ರಸ್ತೆ ಬದಿ ವ್ಯಾಪಾರಿಗಳಲ್ಲಿ ಚರಕ ತಯಾರಿಕೆ ಮತ್ತು ಖಾದಿ ಮಾರಾಟದ ಬಗ್ಗೆ ಮಾಹಿತಿ ಮತ್ತು ತರಬೇತಿ ನೀಡುತ್ತಾ ಮಾತನಾಡುತ್ತಿದ್ದರು.
ಭಾರತದಲ್ಲಿ ಹೆಚ್ಚಾಗುತ್ತಿರುವ ಬಡತನ, ಅಸಮಾನತೆ, ನಿರುದ್ಯೋಗ ಸಮಸ್ಯೆ, ಶೋಷಣೆ ಮುಂತಾದವುಗಳನ್ನು ನಿವಾರಿಸಲು ಗಾಂಧೀಜಿಯವರ ವಿಚಾರಗಳನ್ನ ಮತ್ತೊಮ್ಮೆ ನಾವು ಸಮಾಜದಲ್ಲಿ ಪ್ರತಿಷ್ಠಾಪಿಸಬೇಕು. ಅದಕ್ಕಾಗಿ ನಾವು ಮತ್ತೊಮ್ಮೆ ಚರಕವನ್ನು ಬಯಲಿಗೆ ತಂದು, ಪ್ರಚಾರಪಡಿಸಿ, ಜನರಲ್ಲಿ ಸ್ವಉದ್ಯೋಗಗಳನ್ನ ಪರಿಚಯಿಸಿ ಕೊಡಬೇಕಾಗಿದೆ ಎಂದರು.
ಈಗಲೂ ಸಹ ಜನರಲ್ಲಿ ದೈಹಿಕ ದುಡಿಮೆ ಮಾಡಲು ಹಿಂಜರಿತವಿದ್ದು, ಅದನ್ನು ಪ್ರೋತ್ಸಾಹಿಸುವ ಸಲುವಾಗಿ ಗಾಂಧೀಜಿಯವರು ಚರಕವನ್ನು ಪ್ರಚಾರಪಡಿಸಿದ್ದರು, ಜನರಲ್ಲಿ ಹೆಚ್ಚಿನ ಕೌಶಲ್ಯ ಮತ್ತು ಶ್ರಮಗಳಿದ್ದರೂ ಸಹ, ದುಡಿಮೆಯ ದಾರಿಗಳು ಕಾಣದಂತಾಗಿ ಈಗ ನಿರುದ್ಯೋಗ ಸಮಸ್ಯೆಯಲ್ಲಿ ಬಳಲಿ, ಸಮಾಜಕ್ಕೆ ಹೊರೆಯಾಗಿ ಬದುಕುತ್ತಿರುವವರಿಗೆ ಮತ್ತೊಮ್ಮೆ ನಾವು ಚರಕವನ್ನು ಪರಿಚಯಿಸಿ, ಸಣ್ಣ ಸಣ್ಣ ವ್ಯಾಪಾರಿಗಳ ಮುಖಾಂತರ ಸಹ ಖಾದಿ ಉತ್ಪನ್ನಗಳನ್ನು ಮಾರಾಟ ಮಾಡುವಂತಾಗಬೇಕಾಗಿದೆ ಎಂದರು.
ಖಾದಿ ಮಾರಾಟವನ್ನು ಕೇವಲ ಖಾದಿ ಅಂಗಡಿಯಲ್ಲಿ ಮಾತ್ರ ನಡೆಸುತ್ತಿರುವುದರಿಂದ, ಜನರಲ್ಲಿ ಖಾದಿ ಬಗ್ಗೆ ಪ್ರಜ್ಞೆ ಮತ್ತು ಅರಿವು ಹೆಚ್ಚಾಗದೆ ಹಾಗೆ ಉಳಿದುಕೊಂಡಿದೆ, ರಸ್ತೆ ಬದಿಗಳಲ್ಲಿ, ಬೀದಿ ವ್ಯಾಪಾರಿಗಳಲ್ಲೂ ಸಹ ಖಾದಿಯ ಬಗ್ಗೆ ಜಾಗೃತಿ ಮೂಡಿಸಿ, ಸಣ್ಣ ಸಣ್ಣ ವ್ಯಾಪಾರಿಗಳು, ಸಣ್ಣ ಸಣ್ಣ ಅಂಗಡಿಗಳಲ್ಲೂ, ಫುಟ್ಬಾತ್ ಗಳಲ್ಲೂ, ಸಂತೆಗಳಲ್ಲೂ ಸಹ ಖಾದಿ ಬಟ್ಟೆಯನ್ನ ಮಾರಾಟ ಮಾಡುವಂತೆ ಮತ್ತು ತೊಡುವಂತೆ ಜನರಲ್ಲಿ ಪ್ರೋತ್ಸಾಹಿಸಬೇಕಾಗಿದೆ ಎಂದರು
ಗಣರಾಜ್ಯೋತ್ಸವದ ಸಂದರ್ಭದಲ್ಲಿ ಜನರಿಗೆ ಚರಕದ ಬಗ್ಗೆ ಪರಿಚಯ ಉಂಟು ಮಾಡಿಕೊಡಬೇಕಾಗಿದೆ, ಅದಕ್ಕಾಗಿ ಕಡಿಮೆ ವೆಚ್ಚದಲ್ಲಿ ತಯಾರಾಗುವಂತಹ, ವ್ಯರ್ಥವಾಗಿ ಬಿಸಾಡುವ ಮರದ ತುಂಡುಗಳಿಂದಲೂ ಸಹ ಚರಕವನ್ನ ತಯಾರಿಸಿ, ಮಕ್ಕಳಿಗೂ ಸಹ ಚರಕವನ್ನು ನೀಡಿ, ಮನೆಮನೆಗಳಲ್ಲೂ ಸಹ ಚರಕ ಪ್ರತಿಷ್ಠಾಪನೆ ಬಗ್ಗೆ ಪ್ರಯತ್ನಿಸಬೇಕಾಗಿದೆ ಎಂದರು.
ಬಡಗಿಯವರು ಹೆಚ್ಚುತ್ತಿರುವ ತಾಂತ್ರಿಕ ಜ್ಞಾನದಿಂದಾಗಿ ನಿರುದ್ಯೋಗ ಸಮಸ್ಯೆ ಮತ್ತು ಪೈಪೋಟಿಯನ್ನು ಎದುರಿಸುತ್ತಿದ್ದು, ಚರಕವೂ ಸಹ ಅವರಿಗೆ ಸಹಕಾರಿ ಪದ್ಧತಿಯನ್ನು ಸೂಚಿಸುವಂಥಾಗುತ್ತದೆ, ಬಡಗಿಯವರು ಸ್ವತಹ ತಾವೇ ಚರಕಗಳನ್ನು ತಯಾರಿಸಿ, ಸುತ್ತಮುತ್ತಲಿರುವ ಗ್ರಾಮಸ್ಥರಿಗೆ, ರೈತರಿಗೆ, ಜನಸಾಮಾನ್ಯರಿಗೆ ತಲುಪಿಸುವಂತಹ ಏರ್ಪಾಡು ಮಾಡಬೇಕಾಗಿದೆ. ಅದಕ್ಕಾಗಿ ಹೊಸದಾಗಿ ಬಡಗಿ ಕೆಲಸ ಮಾಡುವವರಿಗೆ ತರಬೇತಿಗಳನ್ನು ನೀಡಿ, ಚರಕವನ್ನು ಪರಿಚಯಿಸಿ, ಅವರ ಮುಖಾಂತರ ಉತ್ಪಾದನೆ ಮಾಡಿಸಬೇಕಾಗಿದೆ ಎಂದು ಪತ್ರಿಕಾ ಪ್ರಕಟಣೆ ಮುಖಾಂತರ ವಿನಂತಿಸಿಕೊಂಡಿದ್ದಾರೆ.
































