ಚೆನ್ನೈ: ದಿವಂಗತ ಮಾಜಿ ಸಿಎಂ ಜೆ. ಜಯಲಲಿತಾ ಅವರ ನಿಕಟವರ್ತಿ ವಿ.ಕೆ. ಶಶಿಕಲಾ ಅವರು ರಾಜಕೀಯಕ್ಕೆ ಮರಳುವುದಾಗಿ ಘೋಷಿಸಿದ್ದಾರೆ.
ಈ ಹಿಂದೆ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಪ್ರಭಾವಿ ಸ್ಥಾನ ಹೊಂದಿದ್ದ ಶಶಿಕಲಾ ಅವರು ದೀರ್ಘಾವಧಿಯವರೆಗೆ ರಾಜಕೀಯಕ್ಕೆ ಗೈರಾಗಿದ್ದರು. ಇದೀಗ ಮತ್ತೆ ರಾಜಕೀಯಕ್ಕೆ ಮರಳುವುದಾಗಿ ತಿಳಿಸಿದ್ದಾರೆ. ಜೊತೆಗೆ ಅವರು 2026 ರ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆಯನ್ನು ಮತ್ತೆ ಅಧಿಕಾರಕ್ಕೆ ತರುವ ಪ್ರತಿಜ್ಞೆ ಮಾಡಿದ್ದಾರೆ.
2026 ರಲ್ಲಿ ನಮ್ಮ ಪಕ್ಷ ಗೆದ್ದು, ನಾವು ಸರ್ಕಾರ ರಚಿಸುತ್ತೇವೆ. ಅದೂ ಕೂಡ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುತ್ತೇವೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಆದ ಸೋಲಿಗೆ ಕೆಲವು ಸ್ವಾರ್ಥಿಗಳ ಕೃತ್ಯವೇ ಕಾರಣವಾಗಿದೆ. ನಾನು ಇದನ್ನೆಲ್ಲಾ ತಾಳ್ಮೆಯಿಂದ ನೋಡುತ್ತಿದ್ದೇನೆ. ಸಮಯ ಬಂದಿದೆ, ಚಿಂತಿಸಬೇಡಿ. ತಮಿಳುನಾಡಿನ ಜನರು ನಮ್ಮೊಂದಿಗಿದ್ದಾರೆ. ಈ ವಿಷಯದಲ್ಲಿ ನಾನು ತುಂಬಾ ಬಲಶಾಲಿಯಾಗಿದ್ದೇನೆ. ನಾನು ಕೂಡ ಶೀಘ್ರದಲ್ಲೇ ಯಾತ್ರೆ ಕೈಗೊಳ್ಳುವ ಯೋಜನೆ ಇದೆ ಎಂದು ಅವರು ಹೇಳಿದರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ ವಿರೋಧ ಪಕ್ಷ ಎಐಎಡಿಎಂಕೆ ಸೋಲನ್ನು ಕಂಡಿತ್ತು. ಇದೀಗ ಇದರ ಬೆನ್ನಲ್ಲೇ ಶಶಿಕಲಾ ಅವರು ರಾಜಕೀಯಕ್ಕೆ ಮರಳುವುದಾಗಿ ಘೋಷಿಸಿದ್ದಾರೆ. ಜೊತೆಗೆ 2026ರಲ್ಲಿ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು, ನಾವು ಸರ್ಕಾರ ರಚಿಸುತ್ತೇವೆ ಎಂದು ತಿಳಿಸಿದ್ದಾರೆ.