ಬೆಂಗಳೂರು: ರಾಜಭವನದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಭಾಸ್ಕರ್ ಎಂದು ಗುರುತಿಸಲಾಗಿದೆ. ಈತ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ವಡ್ಡಹಳ್ಳಿ ನಿವಾಸಿಯಾಗಿದ್ದಾನೆ. ಪೊಲೀಸರ ಆಟವಾಡಿಸಲು ಗೂಗಲ್ ನಲ್ಲಿ ಸರ್ಚ್ ಮಾಡಿ ರಾಷ್ಟ್ರೀಯ ತನಿಖಾ ದಳ ಸಹಾಯವಾಣಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದ. ಆದರೆ ಇದೀಗ ತಾನೇ ಪೊಲೀಸರ ಅತಿಥಿಯಾಗಿದ್ದಾನೆ.
ಬೆದರಿಕೆ ಕರೆ ಬಳಿಕ ಆರೋಪಿ ಬೆಂಗಳೂರಿನಿಂದ ನೇರವಾಗಿ ಆಂಧ್ರದ ಚಿತ್ತೂರಿನ ದೇವಸ್ಥಾನವೊಂದಕ್ಕೆ ತೆರಳಿದ್ದಾನೆ. ಬಾಂಬ್ ಬೆದರಿಕೆ ಕರೆ ಬಂದಿದ್ದ ಫೋನ್ ನಂಬರ್’ನ ನೆಟ್ವರ್ಕ್ ಟ್ರ್ಯಾಕ್ ಮಾಡುತ್ತಿದ್ದ ಪೊಲೀಸರು, ಆರೋಪಿ ಭಾಸ್ಕರ್ ನನ್ನು ಬಂಧನಕ್ಕೊಳಪಡಿಸಿದ್ದಾರೆ. ಈ ಸಂಬಂಧ ವಿಧಾನಸೌಧ ಠಾಣೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ತನಿಖೆಯಲ್ಲಿ ಮನಸ್ಸಿಗೆ ಬಂದಿದ್ದಕ್ಕೆ ಹೀಗೆ ಕರೆ ಮಾಡಿದ್ದೇನೆ ಎಂದು ಆರೋಪಿ ಹೇಳಿದ್ದಾನೆ. ಬಿ.ಕಾಂ ವ್ಯಾಸಂಗ ಮಾಡಿ ರೈತನಾಗಿದ್ದ ಭಾಸ್ಕರ್, ಸೋಮವಾರ ಹೊಸ ಸಿಮ್ ಖರೀದಿಸಿರುವ ಬಗ್ಗೆ ಮಾಹಿತಿ ದೊರೆತಿದೆ. ಬೆದರಿಕೆ ಕರೆ ಮಾಡಲೆಂದೇ ಹೊಸ ಸಿಮ್ ಖರೀಸಿದ್ದನೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.