ಜೈಪುರ: ರಾಜಸ್ಥಾನದ ಜುಂಜುನು ಜಿಲ್ಲೆಯ ಕೋಲಿಹಾನ್ ಗಣಿಯಲ್ಲಿ ಹಿಂದುಸ್ತಾನ್ ಕಾಪರ್ ಲಿಮಿಟೆಡ್‌ಗೆ ಸೇರಿದ ಗಣಿಯಲ್ಲಿ ಲಿಫ್ಟ್ ಕುಸಿದು ಕಂಪನಿಯ ಮುಖ್ಯ ಜಾಗೃತ ದಳದ ಅಧಿಕಾರಿ ಉಪೇಂದ್ರ ಕುಮಾರ್ ಪಾಂಡೆ ಎಂಬುವರು ಸಾವನ್ನಪ್ಪಿದ್ದಾರೆ.
ಸಿಲುಕಿಕೊಂಡ ಇತರ 14 ಅಧಿಕಾರಿಗಳನ್ನು ರಕ್ಷಿಸಲಾಗಿದ್ದು, ತೀವ್ರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದೆ.
ಗಣಿಯಲ್ಲಿನ ಕೆಲಸ ಕಾರ್ಯಗಳ ಬಗ್ಗೆ ತಪಾಸಣೆ ನಡೆಸುವ ನಿಟ್ಟಿನಲ್ಲಿ ಉಪೇಂದ್ರ ಕುಮಾರ್ ಪಾಂಡೆ 14 ಮಂದಿಯ ಜತೆಗೆ ಗಣಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಲಿಫ್ಟ್ ಕೇಬಲ್ ತುಂಡಾಗಿ ಕೆಳಕ್ಕೆ ಬಿದ್ದಿದೆ ಎಂದು ನೀಮ್ ಕಾ ಥಾನಾ ಜಿಲ್ಲಾಧಿಕಾರಿ ಶರದ್ ಮೆಹ್ರಾ ಮಾಹಿತಿ ನೀಡಿದ್ದಾರೆ. ಇನ್ನು ಘಟನೆಯ ಬಗ್ಗೆ ಸೂಕ್ತ ತನಿಖೆಗೆ ಆದೇಶ ನೀಡಲಾಗಿದೆ ಎಂದು ಕೇಂದ್ರ ಗಣಿ ಖಾತೆ ಕಾರ್ಯದರ್ಶಿ ವಿ.ಎಲ್.ಕಾಂತಾ ಹೇಳಿದ್ದಾರೆ. ಖೇತ್ರಿಯಲ್ಲಿ ತಾಮ್ರದ ಗಣಿ 1967 ರಲ್ಲಿ ಸ್ಥಾಪಿಸಲಾಯಿತು.