ಬೆಂಗಳೂರು: ರಾಜ್ಯದಲ್ಲಿ ಡೆಂಘೀ ಅಟ್ಟಹಾಸ ಶುರು ಮಾಡಿದೆ. ಒಂದೇ ವಾರದಲ್ಲಿ 9 ಮಂದಿಯನ್ನು ಬಲಿ ಪಡೆದಿದೆ. ಇನ್ನು ಡೆಂಘಿಯಿಂದ ಸಾವನ್ನಪ್ಪಿದವರಲ್ಲಿ ಬಹುತೇಕರು ಬೆಂಗಳೂರಿನವರೇ ಆಗಿದ್ದಾರೆ. ಇನ್ನು ಡೆಂಘೀ ಕಡಿವಾಣಕ್ಕೆ ಬಿಬಿಎಂಪಿ ಸ್ಟ್ರಿಕ್ಟ್ ರೂಲ್ಸ್ ಜಾರಿಗೆ ಮುಂದಾಗಿದೆ. ರಾಜ್ಯದಲ್ಲಿ ಈ ವರ್ಷ ಅಕ್ಟೋಬರ್ 14 ನಿನ್ನೆಯವರೆಗೂ 11,241 ಜನರಿಗೆ ಡೆಂಘೀ ಜ್ವರ ಕಾಣಿಸಿಕೊಂಡಿದ್ದು, ಈ ಪೈಕಿ ರಾಜಧಾನಿಯ ಪಾಲು ದೊಡ್ಡದಿದೆ. ಬೆಂಗಳೂರಿನಲ್ಲಿಯೇ 6,093 ಜನರನ್ನ ಡೆಂಘೀ ಮಾರಿ ಕಾಡಿದೆ. ಅಕ್ಟೋಬರ್ ಮೊದಲ ವಾರದಲ್ಲಿಯೇ ಬೆಂಗಳೂರಲ್ಲಿ 4 ಮಂದಿ ಡೆಂಘೀಗೆ ಜೀವ ತೆತ್ತಿದ್ದಾರೆ. ದಿಢೀರ್ ಡೆಂಘೀ ಹೆಚ್ಚಾಗಲು ಹವಮಾನ ಬದಲಾವಣೆಯೇ ಕಾರಣ ಎನ್ನಲಾಗ್ತಿದೆ. ಸರ್ಕಾರಿ ಆಸ್ಪತ್ರೆ ಹಾಗೂ ಪ್ರಾಥಮಿಕ ಕೇಂದ್ರಗಳಲ್ಲಿ ಹೆಚ್ಚಿನ ನಿಗಾವಹಿಸಲು ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಈಗಾಗಲೇ ದಾದಿಯರು ಹಾಗೂ ಆಶಾ ಕಾರ್ಯಕರ್ತೆಯರು ಫೀಲ್ಡಿಂಗ್ ಶುರು ಮಾಡಿದ್ದು, ಮನೆ ಮನೆಗೆ ತೆರಳಿ ಡೆಂಘೀ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಬಿಬಿಎಂಪಿಯಿಂದ ಪ್ರತಿ ವಾರ್ಡ್ಗಳಲ್ಲಿ ಔಷದಿ ಸಿಂಪಡಣೆ ಮಾಡಲಾಗಿದ್ದು, ಶಾಲೆ-ಕಾಲೇಜು ವಿದ್ಯಾರ್ಥಿಗಳಿಂದ ಡೆಂಘೀ ಜಾಗೃತಿ ಜಾಥಾ ನಡೆಸಲಾಗುತ್ತಿದೆ.