ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಕಮಿಷನ್ ಲಾಬಿಗಳು ಬಹಿರಂಗವಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರು ಬಿಲ್ಗಾಗಿ ರಾಜ್ಯಪಾಲರಿಗೆ ದೂರು ನೀಡಿದ್ದರು. ಆಗ ಬಿಲ್ ಹಣ ಕೊಡದೇ ಕಮಿಷನ್ ಕುದುರಿಸುವ ಕೆಲಸ ಆಗುತ್ತಿತ್ತು ಎಂದು ಆರೋಪಿಸಿದರು. ಈಗ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷನ ಮನೆಯಲ್ಲಿ ಅಪಾರ ಹಣ ಸಿಕ್ಕಿದೆ. ಈವರೆಗೂ ಗುತ್ತಿಗೆದಾರರ ಮನೆಯಲ್ಲಿ ಇಷ್ಟು ದೊಡ್ಡ ಹಣ ಸಿಕ್ಕಿರಲಿಲ್ಲ ಎಂದರು.
42 ಕೋಟಿ ಸಿಕ್ಕಿದ್ದಕ್ಕೂ ಗುತ್ತಿಗೆದಾರರ ಹಣ ಬಿಡುಗಡೆ ಆಗಿದ್ದಕ್ಕೂ ಲೆಕ್ಕ ಸರಿ ಇದೆ. ಸಿಕ್ಕಿಬಿದ್ದವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಕಾಂಟ್ರಾಕ್ಟರ್. ಯಾರು ಕಮೀಷನ್ ಕೊಟ್ಟಿದ್ದಾರೋ ಅವರಿಗೆ ಹಣ ಕೊಟ್ಟಿದ್ದಾರೆ. ಬಡಪಾಯಿಗಳಿಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.ಮುಖ್ಯಮಂತ್ರಿ ಅವರು ಕೂಡಲೇ ತಾವೇ ಮಾಡಿರುವ ಆಯೋಗದ ಮೂಲಕ ತನಿಖೆ ಮಾಡಿಸಲಿ ಎಂದು ಆಗ್ರಹಿಸಿದರು.
ಹಿಂದೆ ಬಿಜೆಪಿ ಸರ್ಕಾರದ ಮೇಲೆ 40 ಪರ್ಸೆಂಟ್ ಆರೋಪ ಮಾಡಿದ್ದೀರಿ. ಈಗ 50 ಪರ್ಸೆಂಟ್ ಸರ್ಕಾರದ ಜೊತೆ ಕೆಲಸ ಮಾಡುತ್ತಿದ್ದೀರಿ. ಯಾವ ಸರ್ಕಾರ ಸರಿ ಅಂತಾ ನೀವೇ ಆಲೋಚನೆ ಮಾಡಿ ಎಂದರು.