ಬೆಂಗಳೂರು:ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಎಲ್ಲೋ ಒಂದು ಕಡೆ ಅಧಿಕಾರದ ದರ್ಪ ನೆತ್ತಿಗೇರಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪ ವ್ಯಕ್ತಪಡಿಸಿದರು.
ಮಂತ್ರಾಲಯದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮಂಡ್ಯದಲ್ಲಿ ಕೆರೆಗೋಡು ಗ್ರಾಮದ ಗ್ರಾಮ ಪಂಚಾಯತ್ ವತಿಯಿಂದ ನಿರ್ಣಯ ಮಾಡಿ 100 ಅಡಿ ಎತ್ತರದ ಧ್ವಜಸ್ತಂಭ ಸ್ಥಾಪನೆ ಮಾಡಿ, ಧ್ವಜ ಹಾರಿಸಿದ ಸಂದರ್ಭದಲ್ಲಿ ಅದನ್ನು ರಾಜ್ಯ ಸರಕಾರವು ಪೊಲೀಸರ ಮೂಲಕ ದಬ್ಬಾಳಿಕೆ ಮಾಡಿ, ಗೂಂಡಾಗಿರಿ ಮಾಡಿ ಆ ಧ್ವಜ ಇಳಿಸುವ ದುಸ್ಸಾಹಸಕ್ಕೆ ಕೈಹಾಕಿದೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಹದಗೆಡಿಸುವ ಪರಿಸ್ಥಿತಿಯನ್ನು ನಿಮ್ಮ ಸರಕಾರವೇ ನಿರ್ಮಾಣ ಮಾಡುತ್ತಿದೆ ಎಂದು ನಾನು ನೇರವಾಗಿ ಮುಖ್ಯಮಂತ್ರಿಗಳಿಗೆ ಮತ್ತು ಗೃಹ ಸಚಿವರಿಗೆ ಈ ಸಂದರ್ಭದಲ್ಲಿ ಹೇಳುತ್ತೇನೆ ಎಂದು ನುಡಿದರು. ಮಂಡ್ಯ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ನಿರ್ಣಯ ಮಾಡಿದ್ದು, ನಿಮಗೆ ಸಹಿಸಲು ಸಾಧ್ಯವಾಗದಿದ್ದರೆ ಏನು ಮಾಡಲು ಹೊರಟಿದ್ದೀರಿ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಮೋದಿಜೀಯವರ ನಾಯಕತ್ವ ಒಪ್ಪಿಕೊಂಡು ಯಾರೇ ಬಂದರೂ ಕೂಡ, ಪಕ್ಷದ ಹಿತದೃಷ್ಟಿಯಿಂದ ಸರಿ ಇದ್ದರೆ ಅದನ್ನು ಸ್ವಾಗತ ಮಾಡುವುದಾಗಿ ಅವರು ಈ ಕುರಿತ ಪ್ರಶ್ನೆಗೆ ಉತ್ತರ ಕೊಟ್ಟರು.
ಜನಾರ್ದನ ರೆಡ್ಡಿಯವರು ಬಿಜೆಪಿ ಜೊತೆ ಕೈಜೋಡಿಸುವ ಕುರಿತು ಹೇಳಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಬಗ್ಗೆ ದೆಹಲಿ ವರಿಷ್ಠರ ಜೊತೆ ಏನೂ ಚರ್ಚೆ ಮಾಡಿಲ್ಲ. ಚರ್ಚೆ ಮಾಡಿ, ದೆಹಲಿ ಅಭಿಪ್ರಾಯವನ್ನು ತಿಳಿದುಕೊಂಡು ಆಮೇಲೆ ಈ ವಿಚಾರದಲ್ಲಿ ಮುಂದುವರಿಯುತ್ತೇನೆ ಎಂದು ತಿಳಿಸಿದರು.