ಬೆಂಗಳೂರು: ರಾಜ್ಯದ ಮಾಜಿ ಮುಖ್ಯ ಕಾರ್ಯದರ್ಶಿ ಬಿ.ಕೆ.ಭಟ್ಟಾಚಾರ್ಯ (83) ಶುಕ್ರವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ಪತ್ನಿ, ಕರ್ನಾಟಕದ ಮೊದಲ ಮಹಿಳಾ ಮುಖ್ಯ ಕಾರ್ಯದರ್ಶಿ ಥೆರೆಸಾ ಭಟ್ಟಾಚಾರ್ಯ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಬಿ.ಕೆ.ಭಟ್ಟಾಚಾರ್ಯ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ‘ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಶ್ರೀ ಬಿ ಕೆ ಭಟ್ಟಾಚಾರ್ಯ ಅವರು ಶುಕ್ರವಾರ ರಾತ್ರಿ ನಿಧನರಾಗಿದ್ದಾರೆಂದು ತಿಳಿದು ನನಗೆ ದುಃಖವಾಗಿದೆ. 1994-1999ರ ಅವಧಿಯಲ್ಲಿ ನಾನು ಹಣಕಾಸು ಸಚಿವನಾಗಿದ್ದಾಗ, ಅವರು ನನ್ನೊಂದಿಗೆ ಹಣಕಾಸು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅವರು ಪ್ರಾಮಾಣಿಕ ಅಧಿಕಾರಿ ಮತ್ತು ನಾನು ಅವರೊಂದಿಗೆ ಕೆಲಸ ಮಾಡುವುದನ್ನು ಆನಂದಿಸಿದೆ. ಅವರ ಕುಟುಂಬಕ್ಕೆ ನನ್ನ ಆಳವಾದ ಸಂತಾಪಗಳು’ ಎಂದು ಸಿಎಂ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ. ಎರಡು ದಿನಗಳ ಹಿಂದೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಭಟ್ಟಾಚಾರ್ಯ ಅವರನ್ನು ಶುಕ್ರವಾರ ಬೆಳಗ್ಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದೇ ದಿನ ಸಂಜೆ ಕೊನೆಯುಸಿರೆಳೆದಿದ್ದಾರೆ. ಭಟ್ಟಾಚಾರ್ಯ ಅವರು ಡಿಸೆಂಬರ್ 30, 2000 ರಂದು ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತರಾಗಿದ್ದರು. ನಂತರ ಅವರ ಪತ್ನಿ ಥೆರೆಸಾ ಅವರು ಅಧಿಕಾರ ವಹಿಸಿಕೊಂಡಿದ್ದರು. ಮಾಜಿ ಅಧಿಕಾರಿಯ ನಿಧನಕ್ಕೆ ಐಎಎಸ್ ಅಧಿಕಾರಿಗಳ ಸಂಘ ಸಂತಾಪ ವ್ಯಕ್ತಪಡಿಸಿದೆ.