ಇಂದಿನಿಂದ ಆಸ್ತಿ ನೋಂದಣಿ ಶೇಕಡ 20 ರಿಂದ 30ರವರೆಗೆ ದುಬಾರಿ ಆಗಲಿದೆ. ರಾಜ್ಯದಾದ್ಯಂತ ಸ್ಥಿರಾಸ್ತಿ ಮಾರ್ಗಸೂಚಿ ದರ ಏರಿಕೆಯಾಗಿದೆ.
ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿಯಾಗುವ ಆಸ್ತಿಗಳಿಗೆ ಪರಿಷ್ಕೃತ ಮಾರ್ಗಸೂಚಿ ದರ ಅನ್ವಯವಾಗಲಿದ್ದು, ಶೇಕಡ 20 ರಿಂದ 30ರಷ್ಟು ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಹೊರೆ ಹೆಚ್ಚಾಗಲಿದೆ. ಸೆಪ್ಟೆಂಬರ್ 29ಕ್ಕೆ ರಾಜ್ಯದಲ್ಲಿ ಹಳೆಯ ಮಾರ್ಗಸೂಚಿ ದರ ಅನ್ವಯ ಆಸ್ತಿ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿದೆ.
ಸೆಪ್ಟೆಂಬರ್ 30, ಅಕ್ಟೋಬರ್ 1 ಮತ್ತು ಅಕ್ಟೋಬರ್ 2ರಂದು ಸತತವಾಗಿ ರಜೆ ಇದ್ದು, ಅಕ್ಟೋಬರ್ 3ರಿಂದ ಹೊಸ ಮಾರ್ಗಸೂಚಿ ದರದ ಅನ್ವಯ ಆಸ್ತಿ ನೋಂದಣಿ ಪ್ರಕ್ರಿಯೆ ನಡೆಯಲಿದೆ. ಇಂದಿನಿಂದ ಆಸ್ತಿ ಖರೀದಿದಾರರಿಗೆ ಹೆಚ್ಚಿನ ಶುಲ್ಕದ ಹೊರ ಬೀಳಲಿದೆ.
ರಾಜ್ಯದಲ್ಲಿ ಮಾರ್ಗಸೂಚಿ ದರ ಏರಿಕೆಯಾದರೆ ವರ್ಷಕ್ಕೆ 2000 ಕೋಟಿ ರೂ ಆದಾಯ ಬರುತ್ತದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಇತ್ತೀಚೆಗೆ ಹೇಳಿಕೆ ನೀಡಿದ್ದರು. ರಾಜ್ಯದಲ್ಲಿ ಎಲ್ಲಾ ಕಡೆ ಮಾರ್ಗಸೂಚಿ ದರ ಏರಿಕೆ ಆಗಲ್ಲ. ಕೆಲವು ಕಡೆ ಮಾರುಕಟ್ಟೆ ದರಕ್ಕಿಂತ ಮಾರ್ಗಸೂಚಿ ದರ ಹೆಚ್ಚಳ ಇದ್ದರೆ, ಅಂತಹ ಪ್ರದೇಶಗಳಲ್ಲಿ ದರ ಹೆಚ್ಚಳವಾಗುವುದಿಲ್ಲ ಎಂದಿದ್ದರು. ಇನ್ನೂ, ಆಸ್ತಿ ನೋಂದಣಿ ಸೇರಿದಂತೆ ಇತರೆ ಪ್ರಕ್ರಿಯೆಗಳಿಗೆ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಯಿಲ್ಲದೆ ಆಸ್ತಿದಾರರೇ ಬಯಸಿದ ದಿನ, ಸಮಯಕ್ಕೆ ಆಸ್ತಿ ನೋಂದಣಿ ಮಾಡಿಕೊಳ್ಳುವ, ಆನ್ಲೈನ್ನಲ್ಲೇ ಶುಲ್ಕ ಪಾವತಿ ವ್ಯವಸ್ಥೆಯಿರುವ ‘ಕಾವೇರಿ 2.0’ ತಂತ್ರಾಂಶವು ಈಗಾಗಲೇ ಅಳವಡಿಕೆಯಾಗಿದೆ. ಮಾರ್ಗಸೂಚಿ ದರ ಪರಿಷ್ಕರಣೆ ಪ್ರಕ್ರಿಯೆ ಆರಂಭವಾದ ನಂತರ 20 ದಿನಗಳ ಅವಧಿಯಲ್ಲಿ ರಾಜ್ಯದಲ್ಲಿ ಭಾರಿ ಪ್ರಮಾಣದ ಆಸ್ತಿ ನೋಂದಣಿ ಆಗಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 1762 ಕೋಟಿ ರೂ. ಸಂಗ್ರಹವಾಗಿದೆ. ಸೆಪ್ಟೆಂಬರ್ ಕೊನೆಯ ವಾರ 1200 ಕೋಟಿ ರೂ. ಸಂಗ್ರಹವಾಗಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆ ನಾಳೆಯಿಂದ ಹೊಸ ಮಾರ್ಗಸೂಚಿ ದರಗಳ ಪ್ರಕಾರ ದಸ್ತಾವೇಜುಗಳ ನೋಂದಣಿಗೆ ಸಿದ್ಧತೆ ಮಾಡಿಕೊಂಡಿದೆ.