ಬೆಂಗಳೂರು: ದಸರಾ, ದೀಪಾವಳಿ ಸಾಲು ಸಾಲು ಹಬ್ಬ ಹಿನ್ನೆಲೆಯಲ್ಲಿ ಗೋದಾಮಿನಲ್ಲಿ ಪಟಾಕಿ ಸಂಗ್ರಹಿಸಲು ಮಾಲಿಕರು ಶುರುಮಾಡಿಕೊಂಡಿದ್ದಾರೆ. ಆದರೆ ಪ್ರಾಥಮಿಕ ಮಾಹಿತಿ ಪ್ರಕಾರ ಯಾವುದೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಪಟಾಕಿ ಗೋಡೌನ್ಗಳಲ್ಲಿ ಅಗ್ನಿ ಅವಘಡ ಸಂಭವಿಸುತ್ತಿವೆ.
ಈ ಹಿಂದೆ ಹಾವೇರಿ ಹೊರವಲಯದ ಸಾತೇನಹಳ್ಳಿ ಬಳಿ ಭೂಮಿಕಾ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ನಾಲ್ವರು ಮೃತಪಟ್ಟಿದ್ದರು. ಘಟನೆ ನಡೆದು ಎರಡುವರೆ ತಿಂಗಳಲ್ಲಿ ಅತ್ತಿಬೆಲೆ ಬಾಲಾಜಿ ಪಟಾಕಿ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿ 14 ಜನ ಸಾವಿಗೀಡಾಗಿದ್ದಾರೆ. ಇದರಿಂದ ಎಚ್ಚತ್ತ ರಾಜ್ಯ ಸರ್ಕಾರ ರಾಜ್ಯಾದ್ಯಂತ ಇರುವ ಪಟಾಕಿ ಅಂಗಡಿಗಳನ್ನು ಪರಿಶೀಲಿಸುವಂತೆ ಸೂಚನೆ ನೀಡಿದೆ. ಪಟಾಕಿ ಗೋಡೌನ್ ಅಗ್ನಿ ದುರಂತದ ಬಗ್ಗೆ ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ ಇನ್ಮುಂದೆ ಈ ರೀತಿ ಘಟನೆ ಆಗದಂತೆ ಕ್ರಮಕ್ಕೆ ಸೂಚನೆ ನೀಡಿದ್ದೇನೆ. ಪ್ರಕರಣದ ಕುರಿತು ಜಿಲ್ಲಾಧಿಕಾರಿ, ಎಸ್ಪಿ ಜತೆ ಮಾತನಾಡಿದ್ದೇನೆ. ಪಟಾಕಿ ಅಂಗಡಿಗಳನ್ನು ಪರಿಶೀಲನೆ ಮಾಡಲು ಸೂಚನೆ ನೀಡಿದ್ದೇನೆ. ಎಂದು ಹೇಳಿದರು.